ತರಕಾರಿ ಮಾರ್ಕೆಟ್ ವ್ಯಾಪಾರಿಗಳಿಗೆ ಎಚ್ಚರಿಕೆ

h20- Apmc vegg 1
Published on

ಹುಬ್ಬಳ್ಳಿ: ಕರೊನಾ ಎರಡನೇ ಅಲೆಯು ಭೀಕರವಾಗಿದ್ದು, ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು, ಯಾವುದೇ ಕಾರಣಕ್ಕೂ ಗುಂಪುಗೂಡಬಾರದು, ಈ ಬಗ್ಗೆ ವ್ಯಾಪಾರಸ್ಥರು ಗಮನ ಹರಿಸಬೇಕು, ಒಂದು ವೇಳೆ ಮೈಮರೆತು ನಿಯಮಾವಳಿ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ....

ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದ ತರಕಾರಿ ಮಾರುಕಟ್ಟೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ವರ್ತಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಸಮೀರ್ ಮುಲ್ಲಾ ಈ ಎಚ್ಚರಿಕೆ ನೀಡಿದರು.

ಕರಾಳ ಛಾಯೆಯ ಮಧ್ಯೆಯೂ ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದ ತರಕಾರಿ ಮಾರುಕಟ್ಟೆಯಲ್ಲಿ ನಿಯಮಾವಳಿ ಪಾಲನೆಯಾಗದ ಹಿನ್ನೆಲೆಯಲ್ಲಿ ಮಂಗಳವಾರದ ಸಭೆ ಮಹತ್ವ ಪಡೆದುಕೊಂಡಿತ್ತು.

ಬೆಳಗ್ಗೆ 6 ಗಂಟೆಯಿಂದ ಮೂರು ಅಥವಾ ನಾಲ್ಕು ತಾಸು ನಡೆಯುವ ಸಗಟು ತರಕಾರಿ ವಹಿವಾಟು ಸಂದರ್ಭದಲ್ಲಿ ಸಾವಿರಾರು ಜನರು ಒಂದೆಡೆ ಸೇರುತ್ತಾರೆ. ತರಕಾರಿ ತಂದ ರೈತರು, ಖರೀದಿದಾರರು, ಮಧ್ಯವರ್ತಿಗಳು, ಚಿಲ್ಲರೆ ವರ್ತಕರು ಹೀಗೆ ಅಲ್ಲಿ ಜನರ ದೊಡ್ಡ ದೊಡ್ಡ ಗುಂಪುಗಳು ಕಾಣಿಸುತ್ತವೆ. ಅಲ್ಲದೇ ಎಲ್ಲ ವಾಹನಗಳು ಮಾರುಕಟ್ಟೆಯಲ್ಲೇ ಬೀಡಾರ ಹೂಡುತ್ತಿದ್ದವು.

ಅಲ್ಲಿ ಯಾವುದೇ ಪರಸ್ಪರ ಅಂತರ ಕಂಡು ಬರುವುದಿಲ್ಲ. ಬಹುತೇಕ ಜನರು ಮಾಸ್ಕ್ ಧರಿಸಿರುವುದಿಲ್ಲ. ಈ ಎಲ್ಲ ಕಾರಣದಿಂದ ಹಲವು ದಿನಗಳಿಂದ ಕರೊನಾ ಭಯದಲ್ಲೇ ಜನರು ವ್ಯವಹಾರ ನಡೆಸಬೇಕಾಗಿತ್ತು.

ಕರೊನಾ ನಿಯಮಾವಳಿ ಉಲ್ಲಂಘನೆ ಸಲುವಾಗಿ ಈಗಾಗಲೇ ಎಪಿಎಂಸಿಗೆ ದಂಡ ಕೂಡ ಹಾಕಲಾಗಿದೆ. ಇಷ್ಟಾದರೂ ಮಂಗಳವಾರ ಬೆಳಗ್ಗೆ ಮತ್ತೆ ಜನಜಂಗುಳಿ ಸೇರಿಕೊಂಡು ವ್ಯಾಪಾರ ನಡೆಸಿದರು. ಕೂಡಲೇ ಎಚ್ಚೆತ್ತ ಅಧಿಕಾರಿಗಳು ವರ್ತಕರೊಂದಿಗೆ ಸಭೆ ನಡೆಸಿದರು.

ಪ್ರತಿಯೊಬ್ಬರೂ ಕೋವಿಡ್ ನಿಯಮಾವಳಿ ಪಾಲನೆ ಮಾಡಬೇಕು. ಮೊದಲ ಬಾರಿ ದಂಡ ವಿಧಿಸಲಾಗುತ್ತದೆ. ನಂತರವೂ ಕೇಳದೇ ಹೋದರೆ ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಪಾಲಿಕೆ ಹೆಚ್ಚುವರಿ ಆಯುಕ್ತರು ಎಚ್ಚರಿಸಿದರು.

ಎಪಿಎಂಸಿ ನವನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ಮಾತನಾಡಿ, ಪೊಲೀಸ್ ಇಲಾಖೆಯಿಂದ ಎಪಿಎಂಸಿ ತರಕಾರಿ ಮಾರುಕಟ್ಟೆ ಮೇಲೆ ನಿಗಾ ಇಡಲಾಗುವುದು. ಯಾರಾದರೂ ನಿಯಮಾವಳಿ ಮೀರಿ ಜನ ಗುಂಪು ಸೇರಿದರೆ ವೀಡಿಯೋ ದಾಖಲೆ ಸಮೇತ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದರು.

ಎಪಿಎಂಸಿ ಅಧ್ಯಕ್ಷ ಸಹದೇವಪ್ಪ ಸುಡಕೇನವರ ಮಾತನಾಡಿ, ಕರೊನಾ ಗೆಲ್ಲಬೇಕಾದರೆ ಎಲ್ಲರೂ ನಿಯಮ ಪಾಲನೆ ಮಾಡಬೇಕು, ಇದಕ್ಕೆ ಎಲ್ಲ ವರ್ತಕರು ಸಹಕಾರ ನೀಡಬೇಕು. ತರಕಾರಿ ಮಾರಾಟಕ್ಕೆ ಸಾಕಷ್ಟು ಸ್ಥಳಾವಕಾಶ ಇದೆ. ಅಕ್ಕಪಕ್ಕದ ರಸ್ತೆಗಳಲ್ಲಿ ಮಾರ್ಕಿಂಗ್ ಮಾಡಿ ಬಳಸಿಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಗುವುದು. ಅದನ್ನು ಬಳಸಿಕೊಂಡು ದಟ್ಟಣೆ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

ವಲಯ ಕಚೇರಿ 4ರ ಸಹಾಯಕ ಆಯುಕ್ತ ರಮೇಶ ನೂಲ್ವಿ ಮಾತನಾಡಿ, ರೈತರು ತರುವ ತರಕಾರಿ ಮಾರಾಟ ಸಂದರ್ಭದಲ್ಲಿ ಜನದಟ್ಟಣೆ ಉಂಟಾಗದಂತೆ ಎಪಿಎಂಸಿ ಹಾಗೂ ವರ್ತಕರು ಸೂಕ್ತ ಕ್ರಮ ಕೈಗೊಳ್ಳಬೇಕು. ಅದಕ್ಕೆ ಬೇಕಾದ ಸಹಕಾರ ನೀಡುವುದಾಗಿ ಹೇಳಿದರು. ವರ್ತಕರಾದ ಬಿ.ಎ. ಧಾರವಾಡ, ಸಲೀಂ ಬ್ಯಾಹಟ್ಟಿ ಸೇರಿ ತರಕಾರಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net