

ಬೆಳಗಾವಿ: ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಎಸ್.ಸಿ. ಮೋಟರ್ಸ್ ಬಳಿ ಇರುವ ಜೈ ಕಿಸಾನ್ ಹೋಲ್‌ಸೇಲ್ ವೆಜಿಟೇಬಲ್ ಮರ್ಚಂಟ್ಸ್ ಅಸೋಸಿಯೇಶನ್‌ನ ತರಕಾರಿ ಮಾರುಕಟ್ಟೆ ಉದ್ಘಾಟನೆ ಕಾರ್ಯಕ್ರಮ ಜ. 3ರಂದು ಸಂಜೆ 5 ಗಂಟೆಗೆ ಜರುಗಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ದಿವಾಕರ ವೈ. ಪಾಟೀಲ ಮಾಹಿತಿ ನೀಡಿದರು.
ಇಲ್ಲಿನ ತರಕಾರಿ ಮಾರುಕಟ್ಟೆಯ ರೈತ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ತರಕಾರಿ ಮಾರುಕಟ್ಟೆ ಉದ್ಘಾಟಿಸುವರು. ಸಂಸದೆ ಮಂಗಲ ಅಂಗಡಿ ಅತಿಥಿಯಾಗಿ ಆಗಮಿಸುವರು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಫಿರೋಜ್ ಸೇಠ್, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜಯ ಬೆಳಗಾಂವಕರ, ಹೈಕೋರ್ಟ್ ವಕೀಲ ರಾಮಚಂದ್ರ ಮಾಲಿ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ, ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಲಿಂಗರಾಜ ಪಾಟೀಲ ಗೌರವ ಅತಿಥಿಗಳಾಗಿ ಆಗಮಿಸುವರು. ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಬೆಂಗಳೂರು ಹೊರತುಪಡಿಸಿದರೆ ಕರ್ನಾಟಕ ರಾಜ್ಯದಲ್ಲಿ ಬೆಳಗಾವಿಯು ತರಕಾರಿ ಮಾರುಕಟ್ಟೆಗೆ ಹೆಸರುವಾಸಿಯಾಗಿದೆ. ತರಕಾರಿ ಮೂಲ ವ್ಯಾಪಾರಸ್ಥರಿಂದ ಈ ತರಕಾರಿ ಮಾರುಕಟ್ಟೆ ಆರಂಭಿಸಲಾಗಿದೆ. 10.5 ಎಕರೆ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಿಸಲಾಗಿದೆ. ಒಟ್ಟು 232 ಹರಾಜು ಕಟ್ಟೆ ಸಿದ್ಧಪಡಿಸಲಾಗಿದೆ. ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ನೀರು, ಶೌಚಗೃಹ, ವಸತಿ ವ್ಯವಸ್ಥೆ ಸೇರಿ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದರು. ಉಪಾಧ್ಯಕ್ಷ ಮೋಹನ ಪಿ.ಮನ್ನೋಳಕರ ಮಾತನಾಡಿ, ಮೂಲ ವ್ಯಾಪಾರಸ್ಥರಿಂದ ಆರಂಭಿಸಿರುವ ತರಕಾರಿ ಮಾರುಕಟ್ಟೆ ಬಸ್ ನಿಲ್ದಾಣದಿಂದ ಕೇವಲ 2 ಕಿ.ಮೀ. ದೂರವಿದೆ. ಜತೆಗೆ ಹಣ್ಣಿನ ಮಾರುಕಟ್ಟೆಯೂ ಸಮೀಪವಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಮಾರುಕಟ್ಟೆ ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಹೆಚ್ಚು ಅನುಕೂಲವಾಗಲಿದೆ. ಅಗತ್ಯ ಮೂಲ ಸೌಕರ್ಯಗಳೊಂದಿಗೆ ಮಾರುಕಟ್ಟೆ ಸಿದ್ಧವಾಗಿದೆ ಎಂದರು. ಕಾರ್ಯದರ್ಶಿ ಕೆ.ಕೆ. ಭಾಗವಾನ ಮಾತನಾಡಿ, 12 ಗಂಟೆಯೂ ರೈತರಿಗೆ ಈ ತರಕಾರಿ ಮಾರುಕಟ್ಟೆಯ ಸೇವೆ ದೊರೆಯಲಿದೆ. ಇಲ್ಲಿಂದ ಶೇ.70 ತರಕಾರಿ ಗೋವಾ ಹಾಗೂ ಕರಾವಳಿ ಜಿಲ್ಲೆಗಳಿಗೆ ಸರಬರಾಜಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲೇ ಈ ಮಾರುಟ್ಟೆ ಇರುವುದರಿಂದ ಕೃಷಿಕರಿಗೆ ಸಾರಿಗೆ ತಾಪತ್ರಯ ಇರುವುದಿಲ್ಲ. ಸಾಗಣೆ ವೆಚ್ಚವೂ ಕಡಿಮೆಯಾಗಲಿದೆ. ರೈತರು ಈ ಮಾರುಕಟ್ಟೆಯ ಸೌಲಭ್ಯ ಪಡೆಯಬೇಕು ಎಂದರು. ಅಸೋಸಿಯೇಶನ್ ನಿರ್ದೇಶಕರಾದ ಸುನೀಲ ಭೋಸಲೆ, ಸಂಜಯ ಭಾವಿ, ವಿಶ್ವನಾಥ ಪಾಟೀಲ, ಸುರೇಶ ಹಾವಲ್, ರಿಯಾಜ್ ದೋನಿ ಸುದ್ದಿಗೋಷ್ಠಿಯಲ್ಲಿದ್ದರು.