

ಲಕ್ಷ್ಮೇಶ್ವರ: ತರಕಾರಿ ಬೇಕನ್ರೀ... ಎಳೇ ಸವತೆಕಾಯಿ, ಬೀನ್ಸ್, ಹಿರೇಕಾಯಿ, ಮೆಣಸಿನಕಾಯಿ, ಬದನೆಕಾಯಿ.. ಬರ‌್ರೀ.. ಬರ‌್ರೀ...
ಈ ಕೂಗು ಕೇಳಿದ್ದು ಮಾರುಕಟ್ಟೆಯಲ್ಲಲ್ಲ. ಬದಲಾಗಿ ಪಟ್ಟಣದ ದಿ.ಪಿನಿಕ್ಸ್ ಇಂಟರ್‌ನ್ಯಾಶನಲ್ ಶಾಲಾ ಆವರಣದಲ್ಲಿ. ಬುಧವಾರ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರದ ಸಂತೆ ಕಾರ್ಯಕ್ರಮದಲ್ಲಿ ಶಾಲೆಯ ಆವರಣ ಅಕ್ಷರಶಃ ಸಂತೆಯ ಗದ್ದಲದಂತೆಯೇ ಏರ್ಪಟ್ಟಿತ್ತು. ಕಾಯಿಪಲ್ಲೆ ಜತೆಗೆ, ಐಸ್ ಕ್ರೀಂ, ಮಜ್ಜಗಿ, ಸೀರೆಗಳು, ಪಾನಿಪುರಿ, ಹೊಳಿಗೆ ಊಟದ ಖಾನಾವಳಿ, ಸ್ಟೇಷನರಿ ಸೇರಿ ನಾನಾ ತರಹದ ತಿಂಡಿ ತಿನಿಸುಗಳು ಅಲ್ಲಿದ್ದವು. ಶಾಲೆಯ ಮಕ್ಕಳೆಲ್ಲಾ ತರಕಾರಿ ಮಾರಾಟ ಮಾಡುವ ರೈತರಾಗಿದ್ದರು. ಪಾಲಕರು, ಅಕ್ಕಪಕ್ಕದ ನಿವಾಸಿಗಳು, ಶಿಕ್ಷಕರು ಗ್ರಾಹಕರಾಗಿದ್ದರು. ಖರೀದಿ ಹಾಗೂ ಮಾರಾಟ ಭರಾಟೆ ಎಲ್ಲರ ಗಮನ ಸೆಳೆಯಿತು. ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಕೋಟಗಿ, ಮುಖ್ಯೋಪಾಧ್ಯಾಯನಿ ಸುನೀತಾ ಯರ್ಲಗಟ್ಟಿ, ನಿರ್ದೇಶಕರಾದ ರಾಜಶೇಖರ ಹಾಲೆವಾಡಿಮಠ, ಶಿವಯೋಗಿ ಗಾಂಜಿ, ವಿಜಯಕುಮಾರ ಹತ್ತಿಕಾಳ, ಎಸ್.ಬಿ. ಕೊಣ್ಣೂರ, ಚಂದ್ರಶೇಖರ ಕಗ್ಗಲಗೌಡ್ರ, ಕಿರಣಕುಮಾರ ನಾಲವಾಡ, ಇತರರಿದ್ದರು.