ತರಕಾರಿ ದರ ದುಪ್ಪಟ್ಟು

h5-Vegetable 1
Published on

ಹುಬ್ಬಳ್ಳಿ: ಅತಿವೃಷ್ಟಿ ಹಾಗೂ ನೆರೆಯಿಂದಾಗಿ ತರಕಾರಿ ಬೆಳೆ ಹಾನಿಗೊಳಗಾಗಿದ್ದು, ಮಾರುಕಟ್ಟೆಗೆ ದಿನದಿಂದ ದಿನಕ್ಕೆ ಆವಕ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ತರಕಾರಿ ದರ ದುಪ್ಪಟ್ಟಾಗಿದ್ದು, ಗ್ರಾಹಕರ ಜೇಬಿಗೆ ಭಾರವಾಗುತ್ತಿದೆ.

ಕಳೆದ ಆಗಸ್ಟ್​ನಿಂದ ಈ ವರೆಗೆ ಸುರಿದ ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿವೆ. ತೋಟಗಾರಿಕೆ ಇಲಾಖೆ ಪ್ರಕಾರ, ಒಂದು ಸಾವಿರ ಹೆಕ್ಟೇರ್​ನಲ್ಲಿ ತರಕಾರಿ ಬೆಳೆಗಳು ಹಾನಿಯಾಗಿವೆ. ಕೊಯ್ಲಿಗೆ ಬಂದಿದ್ದ ಬಹಳಷ್ಟು ತರಕಾರಿ ಗಿಡಗಳು ಭೂಮಿಯಲ್ಲೇ ಕೊಳೆತು ಹೋಗಿವೆ. ಒಂದಷ್ಟು ಎತ್ತರದ ಮೇಲಿರುವ ಜಮೀನುಗಳಲ್ಲಿ ಮಾತ್ರ ಬೆಳೆ ಉಳಿದುಕೊಂಡಿದೆ.

ಇದೆಲ್ಲದರ ಪರಿಣಾಮ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೆ ಏರುತ್ತಿದ್ದು, ಗ್ರಾಹಕರು ಬೆಲೆ ಕೇಳಿ ಹೌಹಾರುತ್ತಿದ್ದಾರೆ. ಕಳೆದ ತಿಂಗಳು ಇದ್ದ ಬೆಲೆ ಈಗ ಇಲ್ಲ. ಆಗ ಕೆಜಿಗೆ 30- 40 ರೂ.ಗೆ ಸಿಗುತ್ತಿದ್ದ ತರಕಾರಿ ಈಗ 60- 80 ರೂ.ಗೆ ಹೆಚ್ಚಳವಾಗಿದೆ.

ಪ್ರತಿ ಕೇಜಿಗೆ ಹಸಿಮೆಣಸಿನಕಾಯಿ 80 ರೂ, ಬದನೆಕಾಯಿ, ಹಿರೇಕಾಯಿ, ಬೆಂಡೆಕಾಯಿ 70ರೂ, ಬೀನ್ಸ್ ಅವರೆಕಾಯಿ, ಚವಳಿಕಾಯಿ 80ರೂ, ಟೊಮ್ಯಾಟೊ 40ರೂ, ಗಜ್ಜರಿ 60ರೂ, ಕ್ಯಾಬೇಜ್ 50ರೂ.ದರವಿದೆ. ಇನ್ನು ಕೊತ್ತಂಬರಿ ಸೊಪ್ಪು 10- 15 ರೂ.ಗೆ ಒಂದು ಕಟ್ಟು ಮಾರಾಟವಾಗುತ್ತಿದೆ. ಪ್ರತಿಯೊಂದು ಸೊಪ್ಪಿನ ದರವೂ ಹೆಚ್ಚಾಗಿದ್ದು, ಕೆಲವೊಂದು 15- 20 ರೂ. ವರೆಗೆ ತಲುಪಿವೆ.

ರೈತರಿಗೆ ಸಿಗದ ಲಾಭ: ಚಿಲ್ಲರೆ ಮಾರುಕಟ್ಟೆಯಲ್ಲಿ ತರಕಾರಿ ದರ ಹೆಚ್ಚಾಗಿದ್ದರೂ ಅದರ ಲಾಭ ಮಾತ್ರ ರೈತರಿಗೆ ಸಿಗುತ್ತಿಲ್ಲ. ಹೊಲದಿಂದ ಕೊಯ್ಲು ಮಾಡಿ ಸಗಟು ಮಾರುಕಟ್ಟೆಗೆ ತರಕಾರಿ ತೆಗೆದುಕೊಂಡು ಹೋದರೆ ಮಧ್ಯವರ್ತಿಗಳು ಮೊದಲಿಗಿಂತಲೂ ಹೆಚ್ಚಿನ ದರವನ್ನೇನೂ ಕೊಡುತ್ತಿಲ್ಲ. ಹಾಗಾಗಿ ಲಾಭವೆಲ್ಲ ಮಧ್ಯವರ್ತಿಗಳ ಜೇಬಿಗೆ ಇಳಿಯುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ತರಕಾರಿ ಮಾರುಕಟ್ಟೆ ದೊಡ್ಡದು. ಇಲ್ಲಿಗೆ ಜಿಲ್ಲೆಯಿಂದ ಮಾತ್ರವಲ್ಲ ಅಕ್ಕಪಕ್ಕದ ಜಿಲ್ಲೆಗಳಾದ ಗದಗ, ಹಾವೇರಿ, ಕೊಪ್ಪಳ, ಬೆಳಗಾವಿಗಳಿಂದಲೂ ತರಕಾರಿ ಬರುತ್ತದೆ. ನಿತ್ಯ ಮೂರ್ನಾಲ್ಕು ಗಂಟೆ ಕಾಲ ಇಲ್ಲಿ ದೊಡ್ಡ ಮಟ್ಟದಲ್ಲಿ ಸಗಟು ವ್ಯಾಪಾರ ನಡೆಯುತ್ತದೆ. ಇಲ್ಲಿಂದ ತರಕಾರಿ ಜಿಲ್ಲೆಯ ವಿವಿಧ ಮಾರುಕಟ್ಟೆಗಳಿಗೆ ಪೂರೈಕೆಯಾಗುತ್ತದೆ.

ಹುಬ್ಬಳ್ಳಿ ತರಕಾರಿ ಸಗಟು ಮಾರುಕಟ್ಟೆಯಲ್ಲಿನ ಭಾನುವಾರದ ದರಗಳನ್ನು ಚಿಲ್ಲರೆ ಮಾರುಕಟ್ಟೆಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸ ಇದೆ.

ಟೊಮ್ಯಾಟೊ ಪ್ರತಿ ಕ್ವಿಂಟಾಲ್​ಗೆ ಕನಿಷ್ಠ 700 ರೂ.ನಿಂದ 1400 ರೂ. ಇತ್ತು. ಅದೇ ಹಿರೇಕಾಯಿ, ಬದನೆಕಾಯಿ, ಸವತೆಕಾಯಿ, ಹಾಗಲಕಾಯಿ, ಹಸಿಮೆಣಸಿನಕಾಯಿ, ಗಜ್ಜರಿ, ಡೊಣ್ಣಮೆಣಸಿನಕಾಯಿಗಳ ದರ ಪ್ರತಿ ಕ್ವಿಂಟಾಲ್​ಗೆ 700 ರೂ.ನಿಂದ 1200- 1500 ರೂ. ವರೆಗೆ ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಮಾತ್ರ ಮೂರು- ನಾಲ್ಕು ಪಟ್ಟು ಹೆಚ್ಚಾಗಿವೆ.

ಈ ವರ್ಷದ ಮುಂಗಾರಿನಲ್ಲಿ ಸುರಿದ ಮಳೆಗೆ ಒಟ್ಟಾರೆ ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್​ಗೂ ಹೆಚ್ಚಿನ ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳು ಹಾನಿಯಾಗಿವೆ. ಅದರಲ್ಲಿ ತರಕಾರಿ ಸಮಾರು ಒಂದು ಸಾವಿರ ಹೆಕ್ಟೇರ್ ಆಗಬಹುದು. ಅಂದಾಜು 200 ಕೋಟಿ ರೂ.ನಷ್ಟು ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ. ಕೆ.ಸಿ. ಭದ್ರಣ್ಣವರ, ತೋಟಗಾರಿಕೆ ಇಲಾಖೆ ಡಿಡಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net