ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕರಾಟೆ ತರಬೇತಿ ಅತ್ಯಗತ್ಯ: ಟಿ.ಎಸ್. ಲಕ್ಷ್ಮಿಕಾಂತ್

ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕರಾಟೆ ತರಬೇತಿ ಅತ್ಯಗತ್ಯ: ಟಿ.ಎಸ್. ಲಕ್ಷ್ಮಿಕಾಂತ್
Published on

ಹೊಳೆನರಸೀಪುರ:  ದೈಹಿಕವಾಗಿ ಮತ್ತು ಮಾನಸಿಕವಾಗಿ ವಿದ್ಯಾರ್ಥಿಗಳು ಸದೃಢರಾಗಲು ಪೋಷಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಕರಾಟೆ ತರಬೇತಿಯನ್ನು ಕೊಡಿಸುವುದರ ಮೂಲಕ  ಕ್ರೀಡಾ ಸ್ಪೂರ್ತಿಯನ್ನು ಬೆಳೆಸಬೇಕು ಎಂದು ಪುರಸಭಾಧ್ಯಕ್ಷರಾದ ಜ್ಯೋತಿ ತಿಳಿಸಿದರು. 

ಅವರು ಪಟ್ಟಣದ ಸೋಶಿಯಲ್ ಕ್ಲಬ್ ಸಭಾಂಗಣದಲ್ಲಿ ಹಾಸನ ಜಿಲ್ಲಾ ಸ್ಕ್ವಾಯ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಮಾರ್ಷಲ್ ಆರ್ಟ್ಸ್ ಸ್ಪರ್ಧೆ ಮತ್ತು ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಇಂದು ನಡೆಯುವ ಸ್ಪರ್ಧೆಯಲ್ಲಿ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುವುದರ ಮೂಲಕ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾಗಿ ತಾಲೂಕಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.

ಶಸ್ತ್ರಚಿಕಿತ್ಸಕ ಟಿ.ಎಸ್. ಲಕ್ಷ್ಮಿಕಾಂತ್ ಮಾತನಾಡಿ ಕರಾಟೆಪಟುಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕರಾಟೆ ತರಬೇತಿ ಅತ್ಯಗತ್ಯ ಎಂದು ತಿಳಿಸಿದರು.

ನಗರ ಪೊಲೀಸ್ ಠಾಣೆ ಆರಕ್ಷಕಉಪನಿರೀಕ್ಷಕ ಪಿ ಅರುಣ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡುತ್ತಾ ಸ್ಪರ್ಧೆಯಲ್ಲಿ ಎಲ್ಲರೂ ಹಸನ್ಮುಖಿಗಳಾಗಿ ಭಾಗವಹಿಸುವುದರ ಮೂಲಕ ಸೋಲೇ ಗೆಲುವಿನ ಮೆಟ್ಟಿಲೆಂದು ಭಾವಿಸಿ, ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿನ ಕಡೆ ತಮ್ಮ ನಡೆ ನಿರಂತರವಾಗಿ ಸಾಗಬೇಕೆಂದು ನುಡಿದರು. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ  ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಬೇಕು. ಸ್ಥಳೀಯ ಕರಾಟೆ ಪಟುಗಳು ತರಬೇತುದಾರರ ಮಾರ್ಗದರ್ಶನದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ಮತ್ತು ಪದಕ ಗಳನ್ನು ತಮ್ಮದಾಗಿಸಿಕೊಂಡಿದ್ದು ಇದಕ್ಕೆ ಪೂರಕವಾಗಿ ಶ್ರಮಿಸಿರುವ ತರಬೇತು ದಾರರ ಶ್ರಮವನ್ನು ಮುಕ್ತ ಕಂಠದಿಂದ ಪ್ರಶಂಶಿಸಬೇಕಿದೆ ಎಂದರು.

ಸಂಸ್ಥೆಯ ರಾಜ್ಯ ಅಧ್ಯಕ್ಷ ಜಿಬಿ ರವಿಕುಮಾರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರಾಟೆಪಟುಗಳನ್ನು ಉತ್ತೇಜಿಸುವ ಸಲುವಾಗಿ ಕ್ರೀಡೆಗಳಲ್ಲಿ ಭಾಗವಹಿಸಲು ಹಂತ ಹಂತವಾಗಿ ಅವಕಾಶ ಕಲ್ಪಿಸಿಕೊಡಲು ಮುಂದಾಗಿವೆ ಎಂದರು.

ಮಾಸ್ಟರ್ ಅಬ್ದುಲ್ ಹಾಯ್ ಹೆಚ್ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಕರಾಟೆ ಪಟುಗಳು ಸ್ಪರ್ಧೆಗೆ ಆಗಮಿಸಿದ್ದರು. ಆನಂದ ಮಠಪತಿ ಪ್ರಾರ್ಥಿಸಿದರು. ಪುಟ್ಟೇಗೌಡ ಸ್ವಾಗತಿಸಿದರು. ಪುಣ್ಯವತಿ ನಿರೂಪಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net