ತಮಿಳುನಾಡು ಯೋಜನೆ ವಿರೋಧಿಸಿ ಅತ್ತಿಬೆಲೆ ಗಡಿಯಲ್ಲಿ ಪ್ರತಿಭಟನೆ

IMG-20210223-WA0063
Published on

ಆನೇಕಲ್: ತಮಿಳುನಾಡಿನಲ್ಲಿ ಕಾವೇರಿ ಯೋಜನೆ ಕಾಮಗಾರಿ ವಿರೋಧಿಸಿ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಪರ ಒಕ್ಕೂಟಗಳು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು.

ತಮಿಳುನಾಡಿನ ಗಡಿಯಲ್ಲಿ ಅಲ್ಲಿನ ಸರ್ಕಾರ 118 ಕಿಮೀ ಉದ್ದ ಕಾವೇರಿ ನದಿ ಹರಿಯುವ ಸ್ಥಳದಲ್ಲೇ ಕಾಲುವೆ ಮಾಡಲು ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಯೋಜನೆ ಅನುಷ್ಠಾನವಾದರೆ ರಾಜ್ಯದ ಗಡಿ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಸೇರಿ ಹಲವು ಭಾಗಗಳಲ್ಲಿ ನೀರಿನ ಕೊರತೆ ಉದ್ಭವವಾಗಲಿದೆ. ಹಾಗಾಗಿ ತಮಿಳುನಾಡು ಸರ್ಕಾರ ಈ ಯೋಜನೆಯನ್ನು ಕೈಬಿಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ತಮಿಳುನಾಡು ಗಡಿಯಲ್ಲಿ ಕಾವೇರಿ ಯೋಜನೆ ಕಾಮಗಾರಿಗೆ ಕೇಂದ್ರ ಸರ್ಕಾರ ಈಗಾಗಲೇ 5 ಸಾವಿರ ಕೋಟಿ ರೂ. ಹಣ ಮಂಜೂರು ಮಾಡಿದೆ. ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ಕೇಂದ್ರ ಸರ್ಕಾರ ಗಿಮಿಕ್ ಮಾಡುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಈ ಯೋಜನೆ ಕೈಬಿಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.

ಹೆದ್ದಾರಿ ತಡೆಯಲು ಹೋದ ಕನ್ನಡಪರ ಸಂಘಟನೆಗಳ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ವೇಳೆ ಪೊಲೀಸರು ಹಾಗೂ ಕನ್ನಡಪರ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವಾ, ಕರವೇ ಕಾರ್ಯಕರ್ತ ಲೋಕೆಶ್ ಗೌಡ ಮತ್ತಿತರರು ಇದ್ದರು.

ಮಾಸ್ಕ್ ಹಾಕಲು ಹೇಳಿದ ವಾಟಾಳ್: ಪ್ರತಿಭಟನೆ ವೇಳೆ ಸ್ಥಳದಲ್ಲಿ ಅತ್ತಿಬೆಲೆ ಸಬ್ ಇನ್‌ಸ್ಪೆಕ್ಟರ್ ಮುರಳಿ ಮಾಸ್ಕ್ ಧರಿಸದೆ ವಾಟಾಳ್ ಅವರಿಗೆ ರಸ್ತೆ ತಡೆ ಮಾಡದಂತೆ ಸೂಚಿಸುತ್ತಿದ್ದರು. ಆಗ ನಿಮ್ಮ ಮಾಸ್ಕ್ ಎಲ್ಲಿ? ಮೊದಲು ಮಾಸ್ಕ್ ಧರಿಸಿ ಬಂದು ಮಾತಾಡಿ ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರಿಗೆ ನಿಂದನೆ: ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದು, ಪೊಲೀಸ್ ವಾಹನದ ಬಳಿ ಕರೆದೊಯ್ಯುವಾಗ ಸರಿಯಾಗಿ ಹೊತ್ತುಕೊಂಡು ಹೋಗಿಲ್ಲ ಎಂದು ಸಿಟ್ಟಾದ ವಾಟಾಳ್ ನಾಗರಾಜ್, ನೀನು ಮನುಷ್ಯನೋ ಅಥವಾ ಮೃಗವೋ ಎಂದು ಅತ್ತಿಬೆಲೆ ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net