ತಮಿಳುನಾಡಿನ ನೀಲಗಿರಿ ಜಿಲ್ಲೆ ಬಂದ್

29rajesh3
Published on

ಚಾಮರಾಜನಗರ: ನೀಲಿಗಿರಿ ಬೆಟ್ಟಗಳಿರುವ ಪ್ರಸಿದ್ಧ ಗಿರಿಧಾಮ, ಪ್ರವಾಸಿಗರ ನೆಚ್ಚಿನ ತಾಣ ಊಟಿಗೆ ಏ.2 ರಂದು ಪ್ರವಾಸವನ್ನು ನಿಗದಿ ಮಾಡಿದ್ದರೆ ಇಂದೇ ಬದಲಾಯಿಸಿಕೊಳ್ಳಿ. ಏಕೆಂದರೆ ಅಂದು ನೀಲಗಿರಿ ಜಿಲ್ಲೆ ಬಂದ್‌ಗೆ ಕರೆ ನೀಡಲಾಗಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಮಿಳುನಾಡು ರಾಜ್ಯದ ನೀಲಗಿರಿ ಜಿಲ್ಲೆಯ ವ್ಯಾಪಾರಿ ಸಂಘಗಳ ಒಕ್ಕೂಟದಿಂದ ಏ.2ರಂದು ಬಂದ್ ಆಚರಿಸಲಾಗುತ್ತಿದೆ. ಈ ಕುರಿತು ನೀಲಗಿರಿ ವ್ಯಾಪಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಾರೂಕ್ ಶನಿವಾರ ಸುದ್ದಿಗೋಷ್ಠಿ ಮಾಹಿತಿ ನೀಡಿದರು. ನೀಲಗಿರಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಇರುವ ಪ್ರತಿಯೊಂದು ಹೋಟೆಲ್‌ಗಳು, ಲಾಡ್ಜ್‌ಗಳು, ರೆಸಾರ್ಟ್‌ಗಳು ಹಾಗೂ ಇನ್ನಿತರೆ ಅಂಗಡಿಮುಂಗಟ್ಟುಗಳು ಪ್ರವಾಸಿಗರ ಸೇವೆಗೆ ಲಭ್ಯ ಇರುವುದಿಲ್ಲ. ಬಸ್, ಟ್ಯಾಕ್ಸಿ, ಆಟೋ ಹಾಗೂ ಇನ್ನಿತರೆ ಸೇವೆಗಳು ಕೂಡ ಸಂಪೂರ್ಣ ಸ್ಥಗಿತವಾಗಲಿದ್ದು, ಎಲ್ಲವೂ ಸಂಪೂರ್ಣ ಬಂದ್ ಆಗಲಿದೆ. ಏ.2 ರಂದು ಈ ಸ್ಥಳಗಳಿಗೆ ಮುಂಗಡ ಬುಕ್ಕಿಂಗ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದರು.

ತಮಿಳುನಾಡು ವ್ಯಾಪಾರಿ ಸಂಘಗಳ ಒಕ್ಕೂಟ ಹಾಗೂ ಎಲ್ಲಾ ಸಾರ್ವಜನಿಕ ಕಲ್ಯಾಣ ಸಂಘಟನೆಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಾ.29 ರಂದು ಜಿಲ್ಲೆಯ ಪ್ರತಿಯೊಂದು ಮನೆಗಳು ಮತ್ತು ಅಂಗಡಿಗಳ ಮೇಲೆ ಕಪ್ಪು ಬಾವುಟವನ್ನು ಹಾರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಏ.2 ರಂದು ನೀಲಗಿರಿ ಜಿಲ್ಲೆ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದು, ಅಂದು ನೀಲಗಿರಿ ಜಿಲ್ಲೆ ಸಂಪೂರ್ಣ ಸ್ಥಬ್ಧವಾಗಲಿದೆ. ಈ ಕಾರಣಕ್ಕೆ ಏ.2 ರಂದು ನೀಲಗಿರಿ ಜಿಲ್ಲೆಯ ಊಟಿ ಮತ್ತು ಇನ್ನಿತರೆ ಪ್ರವಾಸ ತಾಣಗಳಿಗೆ ಹೋಗಬೇಕೆಂದು ನಿರ್ಧಾರ ಮಾಡಿಕೊಂಡಿರುವ ಪ್ರವಾಸಿಗರು ಹಾಗೂ ನಿತ್ಯವೂ ಸಂಚರಿಸುವ ವಾಹನ ಸವಾರರು ಮತ್ತು ಸಾರ್ವಜನಿಕರು ತಮ್ಮ ವೇಳಾಪಟ್ಟಿಯನ್ನು ಬದಲಾಯಿಸಿಕೊಳ್ಳುವುದು ಸೂಕ್ತ ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಥಾಮಸ್ ಾರೂಕ್, ಜಂಟಿ ಕಾರ್ಯದರ್ಶಿ ಅಬ್ದುಲ್ ರಜಾಕ್, ಪದಾಧಿಕಾರಿಗಳಾದ ಲಿಯಾಖತ್ ಅಲಿ, ಬಾದುಷಾ, ಮಹಮ್ಮದ್ ೈಜ್ ಹಾಜರಿದ್ದರು.

ಬಂದ್‌ಗೆ ಕಾರಣವೇನು:

ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಊಟಿ ಹಾಗೂ ಇನ್ನಿತರೆ ಹಲವಾರು ಪ್ರವಾಸಿ ತಾಣಗಳು ಇದ್ದು, ನಿತ್ಯವೂ ಸಾವಿರಾರು ಸಂಖ್ಯೆಯ ವಾಹನಗಳಲ್ಲಿ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೇ ಇತ್ತೀಚೆಗೆ ಚೆನ್ನೈ ಹೈಕೋರ್ಟ್ ವಾಹನಗಳಿಗೆ ಇ-ಪಾಸ್ ಕಡ್ಡಾಯಗೊಳಿಸಿ ತೀರ್ಪು ನೀಡಿದ್ದು, ಪರಿಣಾಮವಾಗಿ ನಿತ್ಯ 6000 ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಿದೆ. ಇದರಿಂದ ಜಿಲ್ಲೆಯ ಹೋಟೆಲ್, ಲಾಡ್ಜ್, ರೆಸಾರ್ಟ್ ಹಾಗೂ ಇನ್ನಿತರೆ ವ್ಯಾಪಾರಿಗಳ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಇ-ಪಾಸ್ ಸಂಪೂರ್ಣ ರದ್ದುಗೊಳಿಸಬೇಕು ಎಂದು ಜಿಲ್ಲೆಯ ವಿವಿಧ ಸಂಘಟನೆಗಳಿಂದ ಬಂದ್‌ಗೆ ಕರೆ ನೀಡಲಾಗಿದೆ.

ಬೇಡಿಕೆಗಳೇನು?:

ಇ-ಪಾಸ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಮಾಸ್ಟರ್ ಪ್ಲಾನ್ ಕಾಯ್ದೆಯನ್ನು ಪರಿಷ್ಕರಿಸಬೇಕು. ಊಟಿ-ಕುನ್ನೂರ್ ನಗರಸಭಾ ಮಾರುಕಟ್ಟೆ ವ್ಯಾಪಾರಿಗಳ ಬೇಡಿಕೆ ಈಡೇರಿಸಬೇಕು. ಸೆಕ್ಷನ್ 17 ಭೂಮಿ ಪ್ರಶ್ನೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಹಸಿರು ಚಹಾಗೆ ಕನಿಷ್ಠ ಬೆಲೆ ನಿಗದಿಪಡಿಸಬೇಕು. ಹೊಸ ಮನೆ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಮಂಜೂರು-ಮುಳ್ಳಿಯ ಮೂಲಕ ಮನಾರ್ಕಾಡ್ ಮಾರ್ಗವನ್ನು ಪುನರ್ ಆರಂಭಿಸಬೇಕು. ಚಿಲ್ಲಲ್ಲಾ ನೀರಾವರಿ ಯೋಜನೆ ಕೈಬಿಡಬೇಕು. ಪ್ಲಸ್ಟಿಕ್ ನಿಷೇಧ ಕಾನೂನು ಪರಿಷ್ಕರಿಸಬೇಕು. ಪ್ರವಾಸಿ ತಾಣಗಳ ಪ್ರವೇಶ ಮತ್ತು ಪಾರ್ಕಿಂಗ್ ಶುಲ್ಕ ಕಡಿತಗೊಳಿಸಬೇಕು. ಎಕೊ ಪ್ರವಾಸೋದ್ಯಮ ಪ್ರಾರಂಭಿಸಬೇಕು ಎಂಬ ಬೇಡಿಕೆಯನ್ನು ಈಡೇರಿಸುವಂತೆ ಬಂದ್‌ಗೆ ಕರೆನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net