ತಮಿಳುನಾಡಿಗೆ ಹರಿಯುತ್ತಿರುವ ನೀರು ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ

29
Published on

ಮೈಸೂರು: ತಮಿಳುನಾಡಿಗೆ ಕಾವೇರಿ ನದಿ ಮೂಲಕ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜಯಕರ್ನಾಟಕ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.


ಕಾವೇರಿ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಮಳೆ ಕೊರತೆಯಿಂದ ಜಲಾಶಯಗಳು ಭರ್ತಿಯಾಗಿಲ್ಲ. ಈ ವಾಸ್ತವ ಸ್ಥಿತಿಯನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಅವಕಾಶವಿತ್ತು. ಆದರೆ, ಕಾವೇರಿ ನದಿ ನೀರಿನ ಕುರಿತು ರಾಜ್ಯ ಸರ್ಕಾರ ನಿರ್ಲಕ್ಷೃ ಮಾಡಿದ್ದು, ಇದರ ಫಲವಾಗಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.


ನೀರಾವರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಡಾಫೆ ಹೇಳಿಕೆ ನೀಡಿರುವುದು ಸರಿಯಲ್ಲ. ರಾಜ್ಯ ಸರ್ಕಾರ ವಕೀಲರನ್ನು ನೇಮಿಸಿ ವಿವಾದ ಸಂಬಂಧ ಕಾನೂನು ಹೋರಾಟ ಮಾಡಬೇಕೇ ಹೊರತು, ‘ರೈತರೇ ನ್ಯಾಯಾಲಯಕ್ಕೆ ಹೋಗಿ’ ಎಂದು ಹೇಳಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಕಾವೇರಿ ನಿರ್ವಹಣಾ ಪ್ರಾಧಿಕಾರ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ ನೀಡಿರುವುದು ಅವೈಜ್ಞಾನಿಕ. ಇಂತಹ ನಿರ್ಧಾರದಿಂದ ರೈತರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ರಾಜ್ಯದ ಜನತೆಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗಲಿದೆ. ಆದ್ದರಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.


ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಮುಖಂಡರಾದ ಶ್ರೀಧರ್ ನಾಯಕ್, ಸತೀಶ್‌ಗೌಡ, ವಿಜಯಗೌಡ, ಶಾಂತರಾಜು, ಮಂಜುನಾಥ್, ಲಿಂಗರಾಜು ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net