

ಮೈಸೂರು: ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎನ್ನುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ಣಯ ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ನಗರದಲ್ಲಿ ಶನಿವಾರ ಜಾಗಟೆ ಬಡಿದು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಹಣೆಗೆ ನಾಮ ಹಚ್ಚಿಕೊಂಡು, ಕೈಯಲ್ಲಿ ಜಾಗಟೆ ಹಿಡಿದು ಪ್ರತಿಭಟನೆ ನಡೆಸಿದ ಕಾಯಕರ್ತರು ತಕ್ಷಣ ನೀರು ನಿಲ್ಲಿಸುವಂತೆ ಆಗ್ರಹಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪದೇ ಪದೆ ತಮಿಳುನಾಡು ಪರವಾಗಿಯೇ ನಡೆದುಕೊಳ್ಳುತ್ತಿದೆ. ಹೀಗಾಗಿ ಪ್ರಾಧಿಕಾರ ರಚನೆ ಆಗಿರುವುದು ತಮಿಳುನಾಡಿಗಾಗಿಯೇ ಎನ್ನುವ ಭಾವನೆ ಜನರಲ್ಲಿ ಮೂಡುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಮ್ಮ ರಾಜ್ಯದ ಜಲಾಶಯಗಳ ವಸ್ತು ಸ್ಥಿತಿ ಅಧ್ಯಯನ ಮಾಡಿ ಆದೇಶ ನೀಡಬೇಕು. ಇಲ್ಲವೆ ಪ್ರಾಧಿಕಾರವನ್ನೇ ರದ್ದುಪಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಬರುವ ಮುಂಚೆ ಮೇಕೆದಾಟು ಪಾದಯಾತ್ರೆ ಮಾಡಿ, ನಾವು ನಾಡಿನ ರೈತರ, ನೆಲ-ಜಲಗಳ ಪರವಾಗಿರುತ್ತೆವೆ, ರೈತರ ಹಿತ ರಕ್ಷಣೆಯನ್ನು ಕಾಪಾಡುತ್ತೆವೆ ಎಂದು ಹೇಳಿದ್ದರು. ಈಗ ಲೋಕಸಭಾ ಚುನಾವಣೆಗಾಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು. ಮೇಕೆದಾಟು ಯೋಜನೆ ಜಾರಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಮುಖಂಡರಾದ ಗೋಲ್ಡ್ ಸುರೇಶ್, ನೇಹಾ, ಜೂ.ವಿಷ್ಣು(ರಘು), ಪ್ರಭುಶಂಕರ, ವಿಜಯೇಂದ್ರ, ಸಿ.ಎಚ್.ಕೃಷ್ಣಯ್ಯ, ಡಾ.ಶಾಂತರಾಜೇಅರಸ್, ಪುಷ್ಪಾಶಂಭುಕುಮಾರ್, ಶೈಲಜಾ ಇತರರು ಇದ್ದರು.