

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಸೇರಿದಂತೆ ಕಾವೇರಿ ಕಣಿವೆಯ ರೈತರಿಗೆ ವಿಷ ಉಣಿಸಿ, ತಮಿಳುನಾಡಿಗೆ ನೀರುಹರಿಸುತ್ತಿರುವ ಕಾಂಗ್ರೆಸ್ ಸರ್ಕಾರ ನೀರನ್ನು ಸ್ಥಗಿತಗೊಳಿಸುವರೆಗೂ ಮಂಡ್ಯದ ರೈತರು ನಿರಂತರವಾಗಿ ಉಗ್ರ ಚಳವಳಿ ನಡೆಸುವುದಾಗಿ ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಘೋಷಿಸಿದರು.
ಪಟ್ಟಣದ ಸ್ನಾನಘಟ್ಟದಲ್ಲಿ ಗುರುವಾರ ಭೂಮಿ ತಾಯಿ ಹೋರಾಟ ಸಮಿತಿಯ ಕಾರ್ಯಕರ್ತರೊಂದಿಗೆ ನದಿಗಿಳಿದು ಕಾವೇರಿ ನೀರು ಹಿಡಿದು ಪ್ರಮಾಣ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತಾಲೂಕು ಕಚೇರಿವರೆಗೂ ಅರೆಬೆತ್ತಲೆ ಮೆರವಣಿ ನಡೆಸಿ ಬಳಿಕ ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.
ಶತದಿನದ ಸಂಭ್ರಮದಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ವಿಚಾರದಲ್ಲಿ ದ್ರೋಹವೆಸಗಿದೆ. ಕನ್ನಂಬಾಡಿ ಜಲಾಶಯದಲ್ಲಿ ನೀರಿನ ಸಂಗ್ರಹ ತಗ್ಗಿರುವ ಪರಿಣಾಮ ಮುಂದಿನ ದಿನಗಳಲ್ಲಿ ಈ ಭಾಗದ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ಕಾಡಲಿದೆ. ಇಷ್ಟೆಲ್ಲಾ ಗಂಭೀರ ಸಮಸ್ಯೆ ಮನಗಂಡಿದ್ದರೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ವಾಸ್ತವ ಸ್ಥಿತಿ ತಿಳಿಸಿಕೊಡುವಲ್ಲಿ ವಿಫಲರಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಂತಹ ನಾಯಕರಿಗೆ ರಾಜ್ಯದ ಅಧಿಕಾರ ದೊರಕಿರುವುದು ಕನ್ನಡಿಗರ ದೌರ್ಭಾಗ್ಯ ಎಂದರು.
ಸರ್ಕಾರ ತಕ್ಷಣ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ನೀರಿಲ್ಲದೆ ಕೃಷಿ ಮಾಡಲಾಗದ ಕಾವೇರಿ ಕೊಳ್ಳದ ಎಲ್ಲ ರೈತರಿಗೂ ವೈಜ್ಞಾನಿಕವಾಗಿ ಪರಿಹಾರ ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ ಮಂಡ್ಯ ಜಿಲ್ಲೆಯ ರೈತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಂದು ಎಚ್ಚರಿಕೆ ನೀಡಿದರು.
ಸಮಿತಿಯ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ, ಉಪಾಧ್ಯಕ್ಷರಾದ ಜಯರಾಮೇಗೌಡ, ಜಗದೀಶ್, ಸಂಚಾಲಕರಾದ ಡಿ.ಮಂಜುನಾಥ್, ಧನಂಜಯ, ಸಂಘಟನಾ ಕಾರ್ಯದರ್ಶಿಗಳಾದ ಶಿವರಾಜು, ಮಹಾಲಿಂಗು, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಉಂಡುವಾಡಿ ಮಹದೇವು, ಹೋಬಳಿ ಸಂಚಾಲಕ ಪಾಲಹಳ್ಳಿ ರಾಮಚಂದ್ರು, ಪದಾಧಿಕಾರಿಗಳಾದ ರವಿಲಕ್ಷ್ಮಣ, ಚಾಮರಾಜು, ಸಿದ್ದೇಗೌಡ, ರಾಮಚಂದ್ರು, ರಮೇಶ್, ಕಿರಂಗೂರು ಪುಟ್ಟಣ, ಬಲ್ಲೇನಹಳ್ಳಿ ಮಹೇಶ್, ಬೆಳಗೊಳ ಸುನೀಲ್ ಇತರರಿದ್ದರು.