ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳಿಂದ ಮುಂದುವರಿದ ಪ್ರತಿಭಟನೆ

45
Published on

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳಿಂದ ನಗರದಲ್ಲಿ ಬುಧವಾರವೂ ಪ್ರತಿಭಟನೆ ಮುಂದುವರಿಯಿತು.
ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ನಗರ ಘಟಕದ ಕಾರ್ಯಕರ್ತರು, ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗದೆ ನೀರಿನ ಕೊರತೆ ಎದುರಿಸುತ್ತಿವೆ. ಜಲಾನಯನ ಪ್ರದೇಶದ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಕಾವೇರಿ ನಿರ್ವಹಣಾ ಪ್ರಾಧಿಕಾರ, ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿರುವುದು ಖಂಡನೀಯ ಎಂದು ಕಿಡಿಕಾರಿದರು.
ಕಾವೇರಿ, ಕಪಿಲೆ ನಮ್ಮ ಹಕ್ಕು. ಮೊದಲು ನಮ್ಮ ರೈತರ ಹಿತಾಸಕ್ತಿ ಕಾಪಾಡಬೇಕು. ಬಳಿಕ ತಮಿಳುನಾಡಿಗೆ ನೀರು ಬಿಡಬೇಕು. ಆದರೆ ರಾಜ್ಯದ ರೈತರ ಹಿತಾಸಕ್ತಿ ಬದಿಗೊತ್ತಿ ತಮಿಳುನಾಡಿಗೆ ನೀರು ಬಿಡಲಾಗಿದೆ. ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದೇ ರೀತಿ ನೀರು ಹರಿಸುತ್ತಿದ್ದರೆ ಕೆಲ ದಿನಗಳಲ್ಲೇ ಜಲಾಶಯಗಳು ಬರಿದಾಗಲಿವೆ. ಆದ್ದರಿಂದ ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕರಾದ ಕೆ.ಮಹದೇವ್, ಅಶ್ವಿನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶಂಕರೇಗೌಡ, ಮಾಜಿ ಮೇಯರ್‌ಗಳಾದ ರವಿಕುಮಾರ್, ಆರ್.ಲಿಂಗಪ್ಪ, ಸೌಭಾಗ್ಯಾ, ನಗರಪಾಲಿಕೆ ಸದಸ್ಯ ಎಸ್‌ಬಿಎಂ ಮಂಜು, ಮುಖಂಡರಾದ ಎಚ್.ಕೆ.ರಾಮು, ಪ್ರಧಾನ ಕಾರ್ಯದರ್ಶಿ ಗಂಗಾಧರಗೌಡ, ವಕ್ತಾರ ರವಿಚಂದ್ರೇಗೌಡ ಇತರರು ಇದ್ದರು.
ಕಾವೇರಿ ಕ್ರಿಯಾ ಸಮಿತಿಯಿಂದ ಪ್ರತಿಭಟನೆ:
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಾವೇರಿ ಕ್ರಿಯಾ ಸಮಿತಿಯಿಂದ ಮೂರನೇ ದಿನವೂ ಪ್ರತಿಭಟನೆ ನಡೆಸಲಾಯಿತು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಮಾವೇಶಗೊಂಡ ಸಮಿತಿ ಸದಸ್ಯರು, ನೀರು ಬಿಡುವುದನ್ನು ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಕಷ್ಟ ಸೂತ್ರ ಅನುಸರಿಸುವ ಬದಲು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ಕಾವೇರಿ ನಿರ್ವಹಣಾ ಪ್ರಾಧಿಕಾರ, ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಮತ್ತೆ ಆದೇಶ ನೀಡಿರುವುದು ಖಂಡನೀಯ ಎಂದರು.
ವಸ್ತುಸ್ಥಿತಿ ಪರಿಗಣಿಸಿ ತೀರ್ಪು ನೀಡಬೇಕಾದವರು ತಮಿಳುನಾಡಿನ ಪರ ತೀರ್ಪು ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ವಾಸ್ತವ ಪರಿಸ್ಥಿತಿ ಅರ್ಥ ಮಾಡಿಸುವಲ್ಲಿ ವಿಫಲವಾಗಿದೆ. ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಮೇಯರ್ ಶಿವಕುಮಾರ್, ಕರ್ನಾಟಕ ಸೇನಾಪಡೆ ಅಧ್ಯಕ್ಷ ತೇಜಸ್ ಲೋಕೇಶ್ ಗೌಡ, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಕೆ.ಮೋಹನ್‌ಕುಮಾರ್ ಗೌಡ, ಎಂ.ಜೆ.ಸುರೇಶ್, ಬಿಜೆಪಿ ಮುಖಂಡ ಜಯಪ್ರಕಾಶ್, ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ಎನ್‌ಟಿಎಂಎಸ್ ಶಾಲೆ ಒಕ್ಕೂಟದ ಸಮಿತಿಯ ಸಂಚಾಲಕ ಸ.ರ.ಸುದರ್ಶನ್ ಇತರರು ಇದ್ದರು.
ಕರ್ನಾಟಕ ರಕ್ಷಣಾ ಪಡೆ:
ಕರ್ನಾಟಕ ರಕ್ಷಣಾ ಪಡೆ (ಸ್ವಾಭಿಮಾನಿ ಬಣ)ದಿಂದ ನಗರದ ಜಿಲ್ಲಾ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯದ ಕಾವೇರಿ ಕಣಿವೆಯಲ್ಲಿಯೇ ಕುಡಿಯುವ ನೀರಿಗೆ ತೊಂದರೆಪಡುತ್ತಿರುವಾಗ ಇನ್ನೂ 20 ದಿನಗಳ ಕಾಲ ತಮಿಳುನಾಡಿಗೆ ನಿತ್ಯ ನೀರು ಬಿಡುವಂತೆ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ಆದೇಶ ನೀಡಿರುವುದು ಸರಿಯಲ್ಲ. ಮೊದಲು ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಿ, ಬಳಿಕ ತಮಿಳುನಾಡಿನ ಬೆಳೆಗೆ ನೀರು ಕೇಳಲಿ ಎಂದು ಒತ್ತಾಯಿಸಿದರು.
ನೀರು ಬಿಡುವ ಆದೇಶವನ್ನು ಖಂಡಿಸಿ ಘೋಷಣೆ ಕೂಡಿದರು. ಪಡೆಯ ಜಿಲ್ಲಾಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾ ಪಾರ್ಟಿಯಿಂದ ಅಂಚೆ ಪತ್ರ ಚಳವಳಿ
ಕರ್ನಾಟಕ ಪ್ರಜಾಪಾರ್ಟಿ (ರೈತ ಪರ್ವ) ಕಾರ್ಯಕರ್ತರು ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ಪತ್ರ ಚಳವಳಿ ನಡೆಸಿದರು. ಪಕ್ಷದ ಅಧ್ಯಕ್ಷ ಶಿವಣ್ಣ ನೇತೃತ್ವದಲ್ಲಿ 15 ಜನರು ನಗರದ ನ್ಯಾಯಾಲಯ ಮುಂಭಾಗ ಕೆಲಕಾಲ ಘೋಷಣೆ ಕೂಗಿ, ನೀರು ಹಂಚಿಕೆ ವಿಷಯವಾಗಿ ಸಂಕಷ್ಟ ಸೂತ್ರ ರೂಪಿಸಲು ಪ್ರಧಾನಿ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿ ಅಂಚೆ ಪತ್ರ ರವಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net