

ಬೈಲಹೊಂಗಲ, ಬೆಳಗಾವಿ: ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾಗಿರುವ ಪಟ್ಟಣದ ತಬಸುಮ್ ಇರ್ಷಾದ್ ಸವದತ್ತಿ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಕುಟುಂಬಸ್ಥರಿಗೆ 25 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದ ಮುಸ್ಲಿಂ ಸಮುದಾಯದವರು ಉಪವಿಭಾಗಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಟ್ಟಣದ ಇಂಚಲ ರಸ್ತೆಯ ಈದ್ಗಾ ಮೈದಾನ ಹತ್ತಿರದ ಎಂಎಎ ಪ್ರೌಢಶಾಲೆಯಿಂದ ಮುಸ್ಲಿಂ ಸಮುದಾಯದವರು ಇಂಚಲ ಕ್ರಾಸ್, ಬಸ್ ನಿಲ್ದಾಣ, ರಾಯಣ್ಣ ವೃತ್ತ ಮೂಲಕ ಎಸಿ ಕಚೇರಿವರೆಗೆ ಪ್ರತಿಭಟಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಇಂತಹ ಪ್ರಕರಣಗಳು ರಾಜ್ಯದಲ್ಲಿ ಮೇಲಿಂದ ಮೇಲೆ ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಒತ್ತಾಯಿಸಿದರು.
ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಕೂಡಲೇ ಆರೋಪಿಗಳನ್ನು ಬಂಧಿಸದಿದ್ದರೆ ಬೈಲಹೊಂಗಲ ಬಂದ್‌ಗೆ ಕರೆ ನೀಡಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ ಮಹಿಳೆಯರ ರಕ್ಷಣೆಗೆ ಧಾವಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ ಮಾತನಾಡಿದರು. ಇರ್ಷಾದ್ ಸವದತ್ತಿ, ಪುರಸಭೆ ಸದಸ್ಯ ಬುಡ್ಡೆಸಾಬ ಶಿರಸಂಗಿ, ಕರವೇ ತಾಲೂಕಾಧ್ಯಕ್ಷ ರಾಜು ಬೋಳಣ್ಣವರ, ಶಿವಾನಂದ ಕುರುಬೇಟ್, ಅಬಿ ಹಡಪದ, ಅಲ್ಲಾಭಕ್ಷ ದಾಸ್ತಿಕೊಪ್ಪ, ಜಲೀಲ್‌ಅಹ್ಮದ್ ಸಂಗೊಳ್ಳಿ ಇತರರು ಪ್ರತಿಭಟನೆಯಲ್ಲಿದ್ದರು.