ತಪ್ಪು ಮಾಹಿತಿ ನೀಡಿದರೆ ತಲೆದಂಡ

Oplus_133120
ಹುಮನಾಬಾದ್‌ನಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಪ್ರಮುಖರಾದ ಅಫ್ಸರ್‌ಮಿಯಾ, ಅಂಜುಂ ತಬಸ್ಸುಮ್, ದೀಪಿಕಾ ನಾಯ್ಕರ್, ಮಂಜುನಾಥ ಪಂಚಾಳ, ಲಕ್ಷ್ಮೀ ಬಿರಾದಾರ, ದತ್ತಾತ್ರೇಯ ಗಾದಾ ಇದ್ದರು.
Published on

ಹುಮನಾಬಾದ್: ಕೃಷಿ, ಆರೋಗ್ಯ, ಶಿಕ್ಷಣ ಇಲಾಖೆ ಕಾರ್ಯ ಅತ್ಯಂತ ಪ್ರಮುಖವಾಗಿದ್ದು, ಎಲ್ಲ ಅಧಿಕಾರಿಗಳು ಕ್ಷೇತ್ರದ ಅಭಿವೃದ್ಧಿಯಲ್ಲಿ ಸಮನ್ವಯ ಸಾಧಿಸಿ ಗುರಿ ತಲುಪಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಅಧಿಕಾರಿಗಳು ಮಾಹಿತಿಯಿಲ್ಲದೆ ಸಭೆಗೆ ಬರುವುದು, ತಪ್ಪು ಮಾಹಿತಿ ನೀಡುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ಗುಡುಗಿದರು.

ಕೆಲ ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡುತ್ತಿರುವ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ಶಾಸಕರು, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಅವರು ತಪ್ಪು ಮಾಹಿತಿ ನೀಡಿದವರನ್ನು ತರಾಟೆ ತೆಗೆದುಕೊಂಡರು. ಮುಂದಿನ ಸಭೆಯಲ್ಲಿ ಪ್ರಗತಿ ಬಗ್ಗೆ ಕುಂಟು ನೆಪ ಹೇಳಿದರೆ ತಲೆದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜನತೆಗೆ ಒಳ್ಳೆಯ ಸೇವೆ ನೀಡಲು ಅಧಿಕಾರಿಗಳು ಪ್ರಾಮಾಣಿಕತೆಯಿಂದ ಶ್ರಮಿಸಬೇಕು. ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು. ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ವಹಿಸಿ ಸರ್ಕಾರದ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಕ್ಷೇತ್ರದಲ್ಲಿ ನಡೆಯುವ ರಾಜ್ಯ ಹಾಗೂ ಕೇಂದ್ರದ ಯೋಜನೆ ಹಾಗೂ ಅಭಿವೃದ್ಧಿ ಬಗ್ಗೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದ ಸೇರಿ ಜನಪ್ರತಿನಿಧಿಗಳ ಗಮನಕ್ಕೆ ಕಡ್ಡಾಯ ತರಬೇಕು. ಇದರಿಂದ ಕೆಲವೆಡೆ ಕೆಲಸ ವಿಳಂಬವಾಗುತ್ತಿದ್ದರೆ, ಅನುದಾನದ ಕೊರತೆಯಿದ್ದರೆ ಸಂಬಂಧಿಸಿದ ಮೇಲಧಿಕಾರಿ ಹಾಗೂ ಸರ್ಕಾರದ ಗಮನಕ್ಕೆ ತರಲು ಅನುಕೂಲವಾಗಲಿದೆ ಎಂದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಗೈರಾಗುವ ಅಧಿಕಾರಿಗಳಿಗೆ ನೋಟಿಸ್ ನೀಡಲು ತಾಪಂ ಇಒಗೆ ಸೂಚಿಸಿದರು.

ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಅಫ್ಸರ್‌ಮಿಯಾ, ಹುಮನಾಬಾದ್ ತಹಸೀಲ್ದಾರ್ ಅಂಜುಂ ತಬಸ್ಸುಮ್, ತಾಪಂ ಇಒಗಳಾದ ದೀಪಿಕಾ ನಾಯ್ಕರ್, ಲಕ್ಷ್ಮೀ ಬಿರಾದಾರ, ರಮೇಶ ಸುಲ್ಫಿ, ಚಿಟಗುಪ್ಪ ತಹಸೀಲ್ದಾರ್ ಮಂಜುನಾಥ ಪಂಚಾಳ, ಬಸವಕಲ್ಯಾಣ ತಹಸೀಲ್ದಾರ್ ದತ್ತಾತ್ರೇಯ ಗಾದಾ ಇತರರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿಗೆ ಕ್ಲಾಸ್: ಹುಡಗಿ ಗ್ರಾಮದ ಜನತಾನಗರ ಹತ್ತಿರದ ಸರ್ಕಾರಿ ಪ್ರೌಢಶಾಲೆ ಸ್ಥಳ ಅತಿಕ್ರಮಣದ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದ್ದರೂ ನಿರ್ಲಕ್ಷಿಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಶಾಸಕ ಡಾ.ಪಾಟೀಲ್ ತರಾಟೆಗೆ ತೆಗೆದುಕೊಂಡರು. ಕೇವಲ ಕಚೇರಿಯಲ್ಲಿ ಕುಳಿತು ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ. ಶಾಲೆಗಳಿಗೆ ಭೇಟಿ ನೀಡುತ್ತಿಲ್ಲ. ಕಚೇರಿಯಲ್ಲಿ ಎಲ್ಲ ಕೆಲಸಕ್ಕೂ ಹಣ ವಸೂಲಿ ಮಾಡುತ್ತಿರುವ ದೂರುಗಳು ಬರುತ್ತಿವೆ. ತಕ್ಷಣ ಸುಧಾರಿಸಿಕೊಳ್ಳದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಒತ್ತುವರಿ ಬಗ್ಗೆ ಎರಡ್ಮೂರು ದಿನದಲ್ಲಿ ವರದಿ ಸಲ್ಲಿಸುವುದಾಗಿ ತಿಳಿಸಿದ ಬಿಇಒ, ಶಿಕ್ಷಕರಿಗೆ ತೊಂದರೆ ಆಗದಂತೆ ನಿಗಾ ವಹಿಸುತ್ತೇನೆ. ಪ್ರತಿದಿನ ಶಾಲೆಗಳಿಗೆ ಭೇಟಿ ನೀಡಿರುವ ವರದಿ ತಮ್ಮೆಲ್ಲರಿಗೂ ವಾಟ್ಸ್ಆ್ಯಪ್‌ನಲ್ಲಿ ಹಾಕುವುದಾಗಿ ಬಿಇಒ ವೆಂಕಟೇಶ ಗುಡಾಳ ಹೇಳಿದರು. ಸರ್ಕಾರಿ ನೌಕರರ ಚುನಾವಣೆಯಲ್ಲಿ ಶಿಕ್ಷಕರು ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ರಜೆ ದಿನಗಳಲ್ಲಿ ಓಡಾಡಿದರೆ ನಮ್ಮ ಅಭ್ಯಂತರವಿಲ್ಲ. ಶಾಲಾ ಅವಧಿಯಲ್ಲಿ ಓಡಾಡಿದರೆ ಅಂತಹವರ ವಿರುದ್ಧ ಕ್ರಮ ವಹಿಸಿದ್ದೀರಾ ಎಂದು ಶಾಸಕ ಡಾ.ಪಾಟೀಲ್ ಪ್ರಶ್ನಿಸಿದಾಗ, ರಜೆ ದಿನಗಳಲ್ಲಿ ಸಂಘದ ಚುನಾವಣೆಯಲ್ಲಿ ಓಡಾಡಿದ್ದಾರೆ. ಈಗಾಗಲೇ ಈ ಬಗ್ಗೆ ನೋಟಿಸ್ ಸಹ ನೀಡಲಾಗಿದೆ ಎಂದು ತಿಳಿಸಿದರು.

ರಸ್ತೆ ಕಾಮಗಾರಿ ಕಳಪೆ ತನಿಖೆ ನಡೆಯಲಿ: ದುಬಲಗುಂಡಿ-ಕಬೀರಾಬಾದ್ ವಾಡಿ ರಸ್ತೆ ಸಂಪೂರ್ಣ ಕಳಪೆಯಾಗಿದ್ದರೂ ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲವೆ ಎಂದು ಪ್ರಶ್ನಿಸಿದ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಕೆಲಸಕ್ಕೂ ಮುನ್ನ ಬಿಲ್ ಎತ್ತಿರುವ ಬಗ್ಗೆ ಸಮಗ್ರ ತನಿಖೆಗೆ ಲೋಕಾಯುಕ್ತರಿಗೆ ಒಪ್ಪಿಸಬೇಕೆಂದು ಸೂಚಿಸಿದರು. ಕೋಟ್ಯಂತರ ರೂ.ಗಳಲ್ಲಿ ನಿರ್ಮಿಸಿರುವ ರಸ್ತೆ ಸಂಪೂರ್ಣ ಕಳಪೆ ಹಾಗೂ ಈ ಕಾಮಗಾರಿಗೆ ರಸ್ತೆ ಬದಿಯಲ್ಲಿ ೨೦ ಅಡಿಯಷ್ಟು ತೆಗ್ಗು ಅಗೆದು ಮಣ್ಣು ಬಳಸಲಾಗಿದೆ. ಸಂಚಾರಿಗಳಿಗೆ ಇದರಿಂದ ಅಪಾಯವಿದೆ. ಕೂಡಲೇ ಸಂಬಂಧಿಸಿದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಕೈಗೊಂಡು ಅಧಿಕಾರಿಗಳು ವರದಿ ಸಲ್ಲಿಸಬೇಕು. ಯಾರೇ ಗುತ್ತಿಗೆದಾರರಿರಲಿ, ಅಧಿಕಾರಿಗಳು ಮುಲಾಜಿಲ್ಲದೆ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ನೀವೇ ಜವಾಬ್ದಾರಿ ವಹಿಸಬೇಕಾಗುತ್ತದೆ ಎಂದು ಎಂಎಲ್‌ಸಿ ಚಂದ್ರಶೇಖರ ಪಾಟೀಲ್ ಎಚ್ಚರಿಸಿದರು.

ಪಟ್ಟಣ ಸೇರಿ ಕ್ಷೇತ್ರದಲ್ಲಿ ಸಾರ್ಜನಿಕರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕು. ಸರ್ಕಾರದಿಂದ ವೇತನ ಪಡೆಯುವ ವೈದ್ಯರು ಸರ್ಕಾರಿ ಆಸ್ಪತ್ರೆಗಿಂತ ತಮ್ಮ ಖಾಸಗಿ ಕ್ಲಿನಿಕ್‌ಗಳಿಗೆ ಸಮಯ ನೀಡುತ್ತಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಚೆನ್ನಾಗಿ ಚಿಕಿತ್ಸೆ ನೀಡುತ್ತಿಲ್ಲ. ಕೂಡಲೇ ಸುಧಾರಿಸದಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

| ಡಾ.ಸಿದ್ದಲಿಂಗಪ್ಪ ಪಾಟೀಲ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net