

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನಸ್ಸು ಮತ್ತು ದೇಹದ ಚಲನೆಯಲ್ಲಿ ಏಕತೆ, ಸಾಮ್ಯತೆ ಇದ್ದಾಗ ಮಾತ್ರ ತಪ್ಪಿನ ಅರಿವಿನಿಂದ ಮನಃಪರಿವರ್ತನೆಯಾಗಲು ಸಾಧ್ಯ ಜಿಲ್ಲಾಽಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಆಯೋಜಿಸಿದ್ದ ಬಂಧಿಗಳು ಅಭಿನಯಿಸಿದ ತಲೆದಂಡ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಂಽಗಳ ಮನಃಪರಿವರ್ತನೆಗಾಗಿ ಜೈಲು ನಿಯಮಾವಳಿಗಳ ಪ್ರಕಾರ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ಬಂಧಿಗಳಿಗೆ ತಮ್ಮ ತಪ್ಪಿನ ಅರಿವು ಮೂಡಿ, ಜೀವನದಲ್ಲಿ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಬಿಡುಗಡೆಯ ನಂತರದ ಬದುಕಿಗಾಗಿ ಓದು, ಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಡಾ. ಎಂ.ಎ0. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಪ್ರೊ. ವೀರಣ್ಣ ರಾಜೂರ ಕಲಾ ತರಬೇತಿ ಶಿಬಿರದ ಸಮಾರೋಪ ನುಡಿಗಳನ್ನಾಡಿದರು.
ಸಾಧನಾ ಸಂಸ್ಥೆಯ ಸಂಸ್ಥಾಪಕಿ ಇಸಾಬೆಲಾ ಝೇವಿಯರ್ `ತಲೆದಂಡ' ನಾಟಕ ಸಿದ್ಧತೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿದ್ದರು. ರಂಗಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ ಮಾತನಾಡಿದರು. ಪ್ರಿಜನ್ ಮಿನಿಸ್ಟರಿ ಸದಸ್ಯೆ ಸ್ಯಾಲಿ ಡಿಸೋಜಾ, ಸಹಾಯಕ ಜೈಲು ಅಧೀಕ್ಷಕಿ ಬಿ.ಆರ್. ನಿರ್ಮಲಾ ವೇದಿಕೆಯಲ್ಲಿದ್ದರು.
ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ವೈಶಾಲಿ ನಾಯಕ ನಿರೂಪಿಸಿದರು. ಶಿಕ್ಷಕ ಪಿ.ಬಿ. ಕುರಬೇಟ ವಂದಿಸಿದರು.
ಕೇಂದ್ರ ಕಾರಾಗೃಹದ ತಿಂಗಳ ರಂಗ ತರಬೇತಿ ಶಿಬಿರವನ್ನು ಕಲ್ಲಪ್ಪ ಪೂಜಾರಿ, ಹರೀಶ ಜಿಂಕೆ ನಿರ್ದೇಶಿಸಿದರು.