

ಹಾಸನ: ನನಗೆ ಇರುವುದು ಒಂದು ಮತ, ಅವರಿಗೂ ಇರುವುದು ಒಂದೇ ಮತ ಎಂಬ ಹೇಳಿಕೆ ನೀಡಿದ ಕಾರಣಕ್ಕಾಗಿ ಐನೆಟ್ ವಿಜಿಕುಮಾರ್ ಅವರಿಗೆ ಇಂದು ಈ ಪರಿಸ್ಥಿತಿ ಬಂದಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹೇಳಿದರು.
ನಗರದ ಹಿಮ್ಸ್ ಆಸ್ಪತ್ರೆಗೆ ತೆರಳಿ ಐನೆಟ್ ವಿಜಿ ಕುಮಾರ್ ಅವರ ಆರೋಗ್ಯ ವಿಚಾರಿಸಿ ಬಳಿಕ ಮಾತನಾಡಿದ ಅವರು, ನಿಮ್ಮ ತಂದೆಯವರ ಬಗ್ಗೆನೂ ಗೊತ್ತು. ನಾನು ಈ ವಿಷಯವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಈ ಘಟನೆ ನನಗೆ ಬಹಳ ನೋವು ತಂದಿದೆ. ನಾನು ಶನಿವಾರ ಬೆಂಗಳೂರಿಗೆ ಹೋಗುವವನಿದ್ದೆ. ಆದರೆ, ಈಗ ನಾನು ಹಾಸನದಲ್ಲಿಯೇ ಉಳಿಯುತ್ತೇನೆ. ಒಂದು ದಿನ ಕಾಯುತ್ತೇನೆ. ಹಲ್ಲೆ ಪ್ರಕರಣದಲ್ಲಿ ಸಂಬಂಧಪಟ್ಟವರ ಮೇಲೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ನೋಡೋಣ. ಶನಿವಾರ ಸಂಜೆ ಈ ವಿಷಯವಾಗಿ ಪ್ರತಿಕ್ರಿಯೆ ನೀಡುತ್ತೇನೆ. ಅಷ್ಟು ಸುಲಭವಾಗಿ ಈ ಸಮಸ್ಯೆ ಬಿಡುವುದಿಲ್ಲ ಎಂದರು.
ಆರ್‌ಆರ್‌ಎಸ್ ಕಾರ್ಯಕರ್ತರು ದುಡ್ಡಿಗಾಗಿ ಕೆಲಸ ಮಾಡೋರಲ್ಲ. ದೇಶದ ಒಳಿತಿಗಾಗಿ ಕೆಲಸ ಮಾಡುವವರು. ಈ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಜೈಲಿನಲ್ಲಿ ಎಷ್ಟು ಜನರು ಇದ್ದರು ಎಂಬ ಅನುಭವ ನನಗೆ ಇದೆ. ಆರ್‌ಎಸ್‌ಎಸ್ ಬದ್ಧತೆ ನನಗೆ ಗೊತ್ತಿದೆ. ಇಲ್ಲಿ ಅಭ್ಯರ್ಥಿ ಪ್ರಜ್ಚಲ್ ಅಲ್ಲ. ದೇಶದ ಸಮರ್ಥ ನಾಯಕತ್ವಕ್ಕೆ ಅವರು ಶ್ರಮಿಸುತ್ತಾರೆ ಎಂದು ಹೇಳಿದರು.
ಹಿಂದೆ ರಾಹುಲ್ ಗಾಂಧಿ ಅವರು ಹಾಸನಕ್ಕೆ ಬಂದು ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹೇಳಿದರು. ಅವರು ಹೇಳಿದಂತೆ ಈಗ ನಾವು ನಡೆದುಕೊಂಡಿದ್ದೇವೆ. ನಾವು ಈಗ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.
ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಐದಾರು ಜನ ಬಿಜೆಪಿಗರಿಗೆ ಮೇಲೆ ಬೆದರಿಕೆ ಹಾಕಿದ್ದಾರೆ. ನಮಗೆ ರಕ್ಷಣೆ ಬೇಕು ಎಂದು ಮನವಿ ಮಾಡಿದಾಗ ನಾನು ನಿಮ್ಮ ಜತೆಗೆ ಇರುತ್ತೇನೆ. ಮತ್ತೆ ಇಲ್ಲಿಗೆ ಬಂದು ನಿಮ್ಮನ್ನು ಕಾಣುತ್ತೇನೆ ಎಂದು ದೇವೇಗೌಡರು ಭರವಸೆ ನೀಡಿದರು.
ಪ್ರಜ್ವಲ್, ಸಿ.ಟಿ. ರವಿ ಭೇಟಿ
ಹಲ್ಲೆಗೆ ಒಳಗಾಗ ಐನೆಟ್ ವಿಜಿ ಕುಮಾರ್ ಅವರನ್ನು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಸಿ.ಟಿ. ರವಿ, ಶಾಸಕರಾದ ಎಚ್.ಪಿ. ಸ್ವರೂಪ್, ಹುಲ್ಲಳ್ಳಿ ಸುರೇಶ್, ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಅವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ ದೈರ್ಯ ಹೇಳಿದರು.