

ಕೆಜಿಎಫ್: ವೇಣುಗೋಪಾಲಸ್ವಾಮಿ ದೇವಾಲಯ ಮೂರ್ತಿಗಳು ಮತ್ತು ದೇವಾಲಯಕ್ಕೆ ಹಾನಿ ಮಾಡಿದವರು ಯಾರೇ ಇರಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಶಾಸಕಿ ಎಂ.ರೂಪಕಲಾ ಎಚ್ಚರಿಸಿದರು.
ತಾಲೂಕಿನ ಅಲ್ಲಿಕುಂಟೆಯ ಕದಿರೇನಹಳ್ಳಿ ಹೊರ ಹೊಲಯದ ಶ್ರೀ ವೇಣುಗೋಪಾಲಸ್ವಾಮಿ ದೇಗುಲಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು.
ಘಟನೆ ನಡೆದ ದಿನ ಸದನದಲ್ಲಿ ಬಜೆಟ್ ಮೇಲಿನ ಚರ್ಚೆ ಮೇಲೆ ಕ್ಷೇತ್ರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಪೊಲೀಸರೊಂದಿಗೆ ನಿರಂತರ ಸಂಪರ್ಕದಿಂದ ಪರಿಸ್ಥಿತಿಯ ಮಾಹಿತಿ ಪಡೆದಿದ್ದೇನೆ. ಕ್ಷೇತ್ರದಲ್ಲಿ ಇಲ್ಲಿಯವರೆಗೆ ಇಂತಹ ಯಾವುದೇ ಟನೆ ನಡೆದಿರಲಿಲ್ಲ. ತಪ್ಪಿತಸ್ಥರಿಗೆ ತಕ್ಕ ಪಾಠ ಕಲಿಸಲಾಗುವುದು. ಮೇಲ್ನೋಟಕ್ಕೆ ಈ ಟನೆ ದೇವರ ವಿರೂಪ ಹೊಂದಿಲ್ಲದಿದ್ದರೂ ಶಾಂತಿ ಕದಡುವ ಕೆಲಸವಾಗಿದೆ. ಪೊಲೀಸರಿಗೆ ಕೃತ್ಯ ಎಸಗಿದವರನ್ನು ಬಂಧಿಸುವಂತೆ ಸೂಚಿಸಲಾಗಿದೆ ಎಂದರು.
ಬೇತಮಂಗಲ ವೃತ್ತ ಪೊಲೀಸ್ ಇನ್ಸ್ಪೆಕ್ಟರ್ ವೆಂಕಟೇಶ, ನಗರಸಭೆ ಅಧ್ಯಕ್ಷ ವಿ.ಮುನಿಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯರಾಘವರೆಡ್ಡಿ, ಮುಖಂಡರಾದ ಪದನಾಭರೆಡ್ಡಿ, ಕ್ಯಾಸಂಬಳ್ಳಿ ಪೊಲೀಸ್ ಠಾಣೆ ಎಎಸ್ಐ ಶಶಿಕಲಾ ಇತರರಿದ್ದರು.