

ಚಿತ್ರದುರ್ಗ: ವ್ಯಕ್ತಿಯೊಬ್ಬ ತಪ್ಪು ಮಾಡಿದಾಕ್ಷಣ ಆತನನ್ನು ಹಿಂಸಿಸುವುದು, ಹತ್ಯೆಗೈಯುವುದು ಸರಿಯಲ್ಲ. ಶಿಕ್ಷೆ ಕೊಡಿಸಲು ಕಾನೂನು ಇದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಬೆಂಗಳೂರಿನ ಕಾಂಗ್ರೆಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಹೇಳಿದರು.
ರೇಣುಕಸ್ವಾಮಿ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಕುಟುಂಬಕ್ಕೆ ಆರ್ಥಿಕ ನೆರವಿನ ಚೆಕ್ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ತಪ್ಪು ಮಾಡುವುದು ಮಾನವನ ಸಹಜ ಗುಣ. ಹಾಗೆಂದ ಮಾತ್ರಕ್ಕೆ ಕೊಲೆಯೊಂದೇ ಪರಿಹಾರವಲ್ಲ. ನಾವೆಲ್ಲರೂ ಸಂವಿಧಾನದ ಚೌಕಟ್ಟಿನಲ್ಲಿ ಬದುಕುತ್ತಿದ್ದೇವೆ. ಹಾಗಾಗಿ ಕಾನೂನಾತ್ಮಕವಾಗಿ ನಡೆದುಕೊಳ್ಳಬೇಕು ಎಂದರು.
ರೇಣುಕಸ್ವಾಮಿ ಅವರನ್ನು ಅತ್ಯಂತ ಕ್ರೂರವಾಗಿ ಕೊಲೆಗೈಯಲಾಗಿದೆ. ಇದನ್ನು ನಾಗರಿಕ ಸಮಾಜದ ಪ್ರತಿಯೊಬ್ಬರೂ ಖಂಡಿಸಬೇಕು. ಅವರ ಕುಟುಂಬ ಸದಸ್ಯರನ್ನು ನೋಡಿದರೆ, ತುಂಬಾ ನೋವಾಗುತ್ತದೆ. ಮಾನವೀಯ ಸಮಾಜ ಅವರ ಬೆಂಬಲಕ್ಕೆ ನಿಲ್ಲಬೇಕು. ಆರೋಪಿತರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕಾನೂನಾತ್ಮಕವಾಗಿ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ನಂತರ ಅನಿಲ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಆರ್ಥಿಕ ನೆರವಿನ ಚೆಕ್ ನೀಡಿದರು. ಬೆಂಗಳೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಮಂಜುಳಾ, ಚಾಲಕರ ಪರಿಷತ್ ಅಧ್ಯಕ್ಷ ಸೋಮಶೇಖರ್, ಕಾಂಗ್ರೆಸ್ ಮುಖಂಡ ನಿರಂಜನ್, ರಾಜು, ಕೇಶವಮೂರ್ತಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪ್ರತಾಪ್ ಜೋಗಿ, ಮನು ಬೊಮ್ಮಗಟ್ಟೆ, ಪರಭು ಎರೇನಹಳ್ಳಿ ಇತರರಿದ್ದರು.