

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಪತ್ನಿ ಮೇಲಿನ ಹಲ್ಲೆ ಹಾಗೂ ಗರ್ಭಪಾತ ಆರೋಪ ದೂರಿನ ಅನ್ವಯ ನಿಷ್ಪಕ್ಷಪಾತ ಹಾಗೂ ನ್ಯಾಯಯುತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಎನ್.ಆರ್.ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಜನರು, ಶಿಲ್ಪಾ ದಂಪತಿ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿ 13 ಎಕರೆ ಜಮೀನನ್ನು ಬೇರೊಬ್ಬರ ಹೆಸರಿಗೆ ಬರೆಸಿರುವುದಲ್ಲದೆ, ಗರ್ಭಿಣಿ ಶಿಲ್ಪಾ ಅವರ ಹೊಟ್ಟೆಗೆ ಒದ್ದು ಗರ್ಭಪಾತಕ್ಕೆ ಕಾರಣರಾಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ಮಾನವ ಸರಪಳಿ ರಚಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ವಿರುದ್ಧ ಘೋಷಣೆ ಕೂಗಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಎ.ಟಿ. ರಾಮಸ್ವಾಮಿ ಅವರು, ಹಾಸನದಲ್ಲಿ ಪ್ರಜಾಪ್ರಭುತ್ವ ಇಲ್ಲ. ಕುಟುಂಬ ಪ್ರಭುತ್ವ ಇದೆ. ಅದಕ್ಕಾಗಿಯೇ ಇಂತಹ ಹೇಯ ಕೃತ್ಯಗಳು ನಡೆಯುತ್ತಿವೆ. ಗರ್ಭಪಾತದಂತಹ ಪಾಪಕೃತ್ಯ ನಡೆಸಿರುವುದು ತಲೆತಗ್ಗಿಸುವ ವಿಚಾರ. ಹೆದರಿಸಿ ಹದಿಮೂರೂವರೆ ಎಕರೆ ಜಮೀನನ್ನು ಬೇರೊಬ್ಬರ ಹೆಸರಿಗೆ ಕ್ರಯ ಮಾಡಿಸಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನದ ಆಶಯದಂತೆ ಬಡವರ ರಕ್ಷಣೆಗಾಗಿ ನಿಲ್ಲಬೇಕಿದ್ದ ಪೊಲೀಸರೂ, ದೊಡ್ಡವರ ಪರ ನಿಂತಿರುವುದು ಬೇಸರದ ಸಂಗತಿ ಎಂದರು.
ಮುತ್ಸದ್ಧಿಗಳು, ಹಿರಿಯರಾದ ದೇವೇಗೌಡರು-ಚನ್ನಮ್ಮ ದಂಪತಿ ಹೊಟ್ಟೆಯಲ್ಲಿ ಇಂಥವರು ಹುಟ್ಟಿ ಅವರ ಹೆಸರಿಗೆ ಕಳಂಕ ತಂದಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಂತಹ ಕುಟುಂಬದಲ್ಲಿ ಬೇನಾಮಿ ಆಸ್ತಿಗಾಗಿ ಹಲ್ಲೆ ನಡೆಸಿದ್ದು ಅಲ್ಲದೆ ಮಹಿಳೆಯ ಗರ್ಭಪಾತಕ್ಕೆ ಕಾರಣವಾಗಿರುವಂತಹ ಪ್ರಕರಣ ನಡೆದಿರುವುದು ದುರಂತ.ಆದರೆ ಇದರ ಬಗ್ಗೆ ತನಿಖೆ ನಡೆಸಬೇಕಾದ ಅಧಿಕಾರಿಗಳೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರಿಗೆ ಬೈಕ್ ಡಿಕ್ಕಿ ಹೊಡೆಯಿತು ಎಂಬ ಕಾರಣಕ್ಕೆ ದೊಡ್ಡ ರಂಪಾಟ ಮಾಡಿದ್ದ ಭವಾನಿ ರೇವಣ್ಣ ಅವರಿದ್ದ ಕಾರು ಕಿರಣ್ ರೆಡ್ಡಿ ಅವರದು. ಅವರ ಹೆಸರಿಗೆ 13.5 ಎಕರೆ ಭೂಮಿಯನ್ನು ಕ್ರಯ ಮಾಡಿಸಲಾಗಿದೆ. ಇವರಿಗೆ ಪೊಲೀಸರೂ ಬೆಂಬಲವಾಗಿ ನಿಂತಿದ್ದು ಖಂಡನೀಯ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸಿ ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ರೈತರಿಗೆ ಸೇರಬೇಕಿದ್ದ ಯೂರಿಯಾ ರಸಗೊಬ್ಬರ, ಕಾಳಸಂತೆಯಲ್ಲಿ ಮಾರಾಟವಾಗಲು ಇವರೇ ಕಾರಣ ಎಂದು ಆಪಾದಿಸಿದರು. ಇಂಥವರಿಗೆ ರೈತರ ಹೆಸರು ಹೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಈ ವೇಳೆ ದಲಿತ ಸಂಘರ್ಷ ಸಮಿತಿ, ರೈತಸಂಘ, ಕನ್ನಡಪರ ಸಂಘಟನೆ ಮುಖಂಡರು ಹಾಗೂ ಮಹಿಳೆಯರು ಖಂಡನಾ ನಾಮಫಲಕ ಪ್ರದರ್ಶಿಸಿ ಧಿಕ್ಕಾರ ಕೂಗಿದರು. ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಆರ್.ಪಿ. ವೆಂಕಟೇಶ್ ಮೂರ್ತಿ, ಹೊಳೆನರಸೀಪುರ ಪುರಸಭೆ ಮಾಜಿ ಸದಸ್ಯರಾದ ಪುಟ್ಟಿ, ದಸಂಸ ರಾಜ್ಯ ಸಂಚಾಲಕ ಕೆರಗೋಡು ಸೋಮಶೇಖರ್, ದಲಿತ ಮುಖಂಡ ವಿಜಯಕುಮಾರ್, ಅನ್ನಪೂರ್ಣ, ಮೋಹನ್, ರಮೇಶ್ ಇತರರಿದ್ದರು.