

ಸುರಪುರ: ತಾಲೂಕಿನಲ್ಲಿರುವ 18ರಿಂದ 60 ವರ್ಷದೊಳಗಿನ ಪ್ರತಿಯೊಬ್ಬರೂ ತಪ್ಪದೆ ಬೂಸ್ಟರ್ ಡೋಸ್ ಲಸಿಕೆ ತೆಗೆದುಕೊಂಡು ಕೋವಿಡ್ ದೇಶದಿಂದ ಸಂಪೂರ್ಣ ತೊಲಗಿಸಬೇಕು. ಈ ಲಸಿಕೆ 75 ದಿನ ಉಚಿತವಾಗಿ ನೀಡಲಾಗುವುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ರಾಜಾ ವೆಂಕಪ್ಪ ನಾಯಕ ಹೇಳಿದರು.
ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡ 18 ವರ್ಷ ಮೇಲ್ಪಟ್ಟ ಎಲ್ಲ ಸಾರ್ವಜನಿಕರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ತೊಲಗಿದೆ ಎಂದು ಯಾರು ನಿರ್ಲಕ್ಷೃ ವಹಿಸಬಾರದು. ನಮ್ಮ ನೆರೆ ರಾಷ್ಟ್ರಗಳು ಇನ್ನು ಕೋವಿಡ್ನಿಂದ ಮುಕ್ತವಾಗಿಲ್ಲ. ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಬೂಸ್ಟರ್ ಡೋಸ್ ಪಡೆಯಬೇಕು ಎಂದರು.
ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗಿದೆ. 18ರಿಂದ 60 ವರ್ಷದೊಳಗಿನವರು ಲಸಿಕೆ ತೆಗೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಅವಧಿ ಮುಗಿದ ಮೇಲೆ ಬಂದರೆ ಲಸಿಕೆ ಹಣ ನೀಡಿ ಪಡೆದುಕೊಳ್ಳಬೇಕು ಹೀಗಾಗಿ ಸರ್ಕಾರ ನೀಡಿರುವ ಅವಧಿಯಲ್ಲೆ ಬಂದು ಲಸಿಕೆ ತೆಗೆದುಕೊಳ್ಳಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ಬೂಸ್ಟರ್ ಡೋಸ್ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್, ಸದಸ್ಯರಾದ ವೇಣುಮಾಧವ ನಾಯಕ, ನರಸಿಂಹಕಾಂತ ಪಂಚಮಗಿರಿ, ಬಿಜೆಪಿ ಮುಖಂಡ ವೇಣುಗೋಪಾಲ ಜೇವರ್ಗಿ ಇತರರಿದ್ದರು.