

ಹೊಸಕೋಟೆ: ಜೀವ ಇದ್ದರೆ ಮಾತ್ರ ಜೀವನ ನಡೆಸಲು ಸಾಧ್ಯ. ಆದ್ದರಿಂದ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಮನೆಯ ಎಲ್ಲ ಸದಸ್ಯರು ಕಡ್ಡಾಯವಾಗಿ ಕರೊನಾ ಲಸಿಕೆ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ತಿಳಿಸಿದರು.
ನಗರದ ಪೊಲೀಸ್ ಠಾಣೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಠಾಣಾ ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡಿ, ಪೊಲೀಸರು ಹೆಚ್ಚಿನ ಸಮಯವನ್ನು ಮನೆಯಿಂದ ಹೊರಗೆ ಕಳೆಯುವ ಪರಿಸ್ಥಿತಿ ಇದೆ. ಆದ್ದರಿಂದ ಸಿಬ್ಬಂದಿ ಕರೊನಾ ನಿಯಮ ಪಾಲಿಸದಿದ್ದರೆ ಸೋಂಕು ತಗುಲುವ ಜತೆಗೆ ಕುಟುಂಬಕ್ಕೂ ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸಣ್ಣ ಪ್ರಮಾಣದ ಆರೋಗ್ಯ ತೊಂದರೆ ಕಂಡು ಬಂದರೂ ನಿರ್ಲಕ್ಷ್ಯ ಮಾಡದೆ ಕೂಡಲೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಠಾಣೆಗಳಲ್ಲಿ ಅನವಶ್ಯಕವಾಗಿ ದೂರುದಾರರನ್ನು ಕಾಯಿಸಬೇಡಿ. ಠಾಣೆಗಳಲ್ಲಿ ಹೆಚ್ಚಿನ ಜನ ಸೇರದಂತೆ ಕ್ರಮವಹಿಸಿ. ಗಾಳಿ ಸುದ್ದಿಗೆ ಪೊಲೀಸರು ಹೆದರುವ ಅವಶ್ಯಕತೆ ಇಲ್ಲ. ಯಾವುದೇ ಸಿಬಂದಿಗೆ ಆರೋಗ್ಯ ಸಮಸ್ಯೆ ಕಂಡು ಬಂದ ಕೂಡಲೆ ರಜೆ ನೀಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚನೆ ನೀಡಿದರು.
ಪ್ರತಿ ದಿನ ಕನಿಷ್ಠ 30 ರಿಂದ 45 ನಿಮಿಷ ಉಸಿರಾಟ ಸಂಬಂಧಿಸಿದ ಯೋಗಾಸನ ಹಾಗೂ ವ್ಯಾಯಾಮ ಮಾಡುವುದು ಒಳ್ಳೆಯದು ಹಾಗೂ ಇದಕ್ಕೆ ಸಂಬಂಧಿಸಿದಂತೆ ಯೋಗ ಶಿಕ್ಷಕರಿಂದ ಪೊಲೀಸ್ ಠಾಣೆಗಳಲ್ಲಿ ಯೋಗಾಸನ ಹಾಗೂ ವ್ಯಾಯಾಮಕ್ಕೆ ತರಬೇತಿ ನೀಡಲು ಸೂಚಿಸಲಾಗಿದೆ ಎಂದರು.
ಡಿವೈಎಸ್‌ಪಿ ಉಮಾಶಂಕರ್, ವೃತ್ತ ನಿರೀಕ್ಷಕ ಶಿವರಾಜ್ ಹಾಗೂ ಠಾಣಾ ಸಿಬ್ಬಂದಿ ಹಾಜರಿದ್ದರು.