

ಬೈಲಹೊಂಗಲ: ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಕರೊನಾ ಸೋಂಕು ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಭಾನುವಾರ ಜನಪ್ರತಿನಿಧಿಗಳ ಸಭೆ ನಡೆಸಿದರು. ಅಧಿಕಾರಿಗಳು, ಗ್ರಾಪಂ ಆಡಳಿತ ಮಂಡಳಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಜನತೆ ಸಹಕಾರ ನೀಡಬೇಕು. ಸಹಕರಿಸದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸೋಂಕು ತಡೆಗಟ್ಟಲು ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯವರು ಜತೆಗೂಡಿ ಕಾರ್ಯಪಡೆ ರಚಿಸಬೇಕು ಎಂದರು. ಎಸ್ಸಿ, ಎಸ್ಟಿ ಕಾಲನಿಯ ಮನೆ-ಮನೆಗೆ ತೆರಳಿ ಧೈರ್ಯ ತುಂಬಿದರು. ಕರೊನಾದಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಗ್ರಾಮದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ.
ರೋಗಿಗಳು ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಕ್ವಾರಂಟೈನ್ ಆಗಬೇಕು ಎಂದರು. ಜಿಪಂ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ವೈದ್ಯರಿದ್ದು, ತಾತ್ಕಾಲಿಕ ಸೇವೆಯಲ್ಲಿದ್ದಾರೆ. ಅವರು ಕೂಡ ಸೋಂಕಿಗೆ ತುತ್ತಾಗಿದ್ದರಿಂದ ಬೇರೆ ವೈದ್ಯರೂ ಬರಲಿಲ್ಲ. ಹಾಗಾಗಿ, ಗ್ರಾಮದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಇಬ್ಬರು ಕಾಯಂ ವೈದ್ಯರನ್ನು ನೇಮಿಸಿ ಎಂದು ಮನವಿ ಮಾಡಿದರು. ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು, ಕಾಯಂ ಪಿಡಿಒ ನೇಮಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಎಸಿ ಶಶಿಧರ ಬಗಲಿ, ತಹಸೀಲ್ದಾರ್ ಬಸವರಾಜ ನಾಗರಾಳ, ಮಹೇಶ ಉಣ್ಣಿ, ಈರಣ್ಣ ರಿತ್ತಿ, ಡಾ. ಸಂಜಯ ಸಿದ್ದಣ್ಣವರ, ಡಾ.ಮಹಾಂತೇಶ ಹಿರೇಮಠ, ಡಾ.ಸೋಮನಿಂಗ ಪಾಶ್ವಾಪುರ ಇದ್ದರು.
ಎಂ.ಕೆ.ಹುಬ್ಬಳ್ಳಿ ವರದಿ: ಪಟ್ಟಣದಲ್ಲಿ ಭಾನುವಾರದಿಂದ ಆರಂಭಗೊಂಡಿರುವ ಮನೆ-ಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯ ತಪಾಸಣೆ ಹಾಗೂ ಸಮೀಕ್ಷೆ ಕಾರ್ಯವನ್ನು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪರಿಶೀಲಿಸಿದರು. ಮನೆ-ಮನೆಗೆ ಬರುತ್ತಿರುವ ತಪಾಸಣೆ ಸಿಬ್ಬಂದಿಗೆ ಸಹಕಾರ ನೀಡಿ, ಕೋವಿಡ್ ತಡೆಗಟ್ಟಲು ಕೈಜೋಡಿಸುವಂತೆ ಕೋರಿದರು. ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಅಲ್ಲಿನ ವಿವಿಧ ಇಲಾಖೆ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮತ್ತು ಜನಪ್ರತಿನಿಧಿಗಳಿಗೆ ತಿಳಿಸಿದರು. ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಕ್ಷೇತ್ರದೆಲ್ಲೆಡೆ ಆರೋಗ್ಯ ತಪಾಸಣೆ ಕಾರ್ಯ ಪ್ರಗತಿಯಲ್ಲಿದ್ದು, ಜನರ ಆರೋಗ್ಯ ರಕ್ಷಣೆಯೇ ನಮ್ಮ ಗುರಿಯಾಗಿದೆ. ಎಲ್ಲರೂ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ವಿನಂತಿಸಿದರು. ತಹಸೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಪಪಂ ಮುಖ್ಯಾಧಿಕಾರಿ ಐ.ಸಿ.ಸಿದ್ನಾಳ, ತಾಲೂಕು ಆರೋಗ್ಯಾಧಿಕಾರಿ ಸಂಜಯ ಸಿದ್ದಣ್ಣವರ, ವೈದ್ಯಾಧಿಕಾರಿ ಮಹಾಂತೇಶ ಮರೇದ ಹಾಗೂ ಪಪಂ ಸದಸ್ಯರು, ಆರೋಗ್ಯ, ಕಂದಾಯ, ಪಪಂ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.