

ಜಯಲಕ್ಷ್ಮೀ ರಾಮಣ್ಣ ಅವರ ಕುರಿತು ರಾಜ್ಯ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಬಿ.ಆರ್. ನಟರಾಜ ಜೋಯಿಸ್ ಅವರು ರಚಿಸಿರುವ ‘ಮಗು ಎದ್ದಿದೆ’ ಕೃತಿಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಬಿಡುಗಡೆ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಿಮಾಲಯ ಪ್ರತಿಷ್ಠಾನ ವತಿಯಿಂದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 92 ವರ್ಷಗಳ ಸಾರ್ಥಕ ಜೀವನ ನಡೆಸಿದ ಜಯಲಕ್ಷ್ಮೀ ಅವರು ಇಡೀ ಜೀವನವನ್ನು ತನ್ನವರ ಬದುಕಿಗಾಗಿ ಸವೆಸಿದ, ನಡೆಸಿದ ಸಂಘರ್ಷದ ಸಾರ ಈ ಪುಸ್ತಕ ಎಂದರು.
ವೇದ ಪಾರಂಗತರು, ಶಿಷ್ಟ ಸಂಪ್ರದಾಯ, ಸನಾತನ ಸಂಸ್ಕೃತಿಯ ಹರಿಕಾರರ ಕುಟುಂಬಕ್ಕೆ ಸೇರಿದ ಇವರ ಆಚರಣೆ, ವಿಧಾನ, ಬದಲಾದ ಕಾಲಮಾನದ ವಿವರಗಳನ್ನು ದಾಖಲಿಸಲಾಗಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬಾಗೂರಿನ ಶ್ಯಾನುಭೋಗರಾಗಿದ್ದ ರಾಮಣ್ಣ ಅವರು ಸುತ್ತಮುತ್ತಲಿನ ಹತ್ತು ಹಳ್ಳಿಗಳಲ್ಲಿ ಯಾವ ರೀತಿ ಪ್ರಸಿದ್ಧರಾಗಿದ್ದರು, ಶ್ಯಾನುಭೋಗ ಪದ್ಧತಿ ರದ್ದಾದಾಗ ಸುಪ್ರೀಂ ಕೋರ್ಟ್‌ವರೆಗೂ ಹೋಗಿ ಯಾವ ರೀತಿ ಗೆದ್ದರು ಮೊದಲಾದ ವಿವರಗಳಿವೆ ಎಂದು ಅವರು ಹೇಳಿದರು.
ಪ್ರಸ್ತುತ ಪತಿ-ಪತ್ನಿ-ಒಂದು ಮಗುವೇ ಕುಟುಂಬವಾಗಿರುವಾಗ ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬದಲ್ಲಿ 50-60 ಜನ ಹೇಗೆ ಒಟ್ಟಿಗೆ ಬದುಕುತ್ತಿದ್ದರು. ಆ ಕಾಲದ ವಿವಾಹ, ಧಾರ್ಮಿಕ ಆಚರಣೆಗಳು ಹೇಗಿದ್ದವು ಎಂಬುದನ್ನು ವಿವರಿಸಲಾಗಿದೆ. ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ಈ ಕೃತಿಯು ತಂದೆ- ತಾಯಿಯರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಸಾರುತ್ತದೆ ಎಂದರು.
ಲೇಖಕ ಬಿ.ಆರ್. ನಟರಾಜ ಜೋಯಿಸ್ ಅವರನ್ನು ಗೌರವಿಸಲಾಯಿತು. ಹಿರಿಯ ಸಮಾಜ ಸೇವಕ ಕೆ. ರಘುರಾಂ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಮುಖಂಡ ಎಂ.ಎಲ್. ರವೀಂದ್ರ, ಎಕೆಬಿಎಂಎಸ್ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್.ಅನಂತ ಮುಖ್ಯ ಅತಿಥಿಗಳಾಗಿದ್ದರು. ಯೋಗಪ್ರಕಾಶ್ ಸ್ವಾಗತಿಸಿದರು. ಉಮಾಶಂಕರ್ ನಿರೂಪಿಸಿದರು. ವಿದ್ವಾನ್ ಲಕ್ಷ್ಮೀನರಸಿಂಹ ಶಾಸಿ ವೇದಘೋಷ ಪಠಿಸಿದರು. ವಕೀಲ ಹಾಗೂ ನೋಟರಿ ಕೆ.ವಿ. ವಾಸು ಪ್ರಾರ್ಥಿಸಿದರು. ಗುರುಪ್ರಸಾದ್ ಭಟ್, ಮುತ್ತುಸ್ವಾಮಿ ಮೊದಲಾದವರು ಇದ್ದರು.