

ಹೊಳೆನರಸೀಪುರ: ಜನರು ಯಾವುದೇ ಕೊರತೆ ಇಲ್ಲದೆ ಸಂತೋಷದಿಂದ ಬಾಳಲಿ ಎಂದು ಅತ್ಯಂತ ಮಹತ್ವಾಕಾಂಕ್ಷೆಯಿಂದ ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು, ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಬೇಸರ ವ್ಯಕ್ತಪಡಿಸಿದರು.
ತಾಲೂಕು ಆಡಳಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಪ್ರಭಾವಿಗಳು ಕೆರೆಗಳನ್ನು ಮುಚ್ಚಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದ್ದು, ಕೆಂಪೇಗೌಡರ ಕನಸಿನ ಬೆಂಗಳೂರು ಮಾಯವಾಗಿದೆ. ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸುವಾಗ ಜನರಿಗಾಗಿ ಕೆರೆಗಳು, ರಕ್ಷಣೆಗಾಗಿ ಕೋಟೆಗಳು, ಸುತ್ತಲೂ ವಿವಿಧ ದೇವಾಲಯಗಳನ್ನು ಕಟ್ಟಿಸಿದ್ದರು. ವಿವಿಧ ವೃತ್ತಿಯ ಜನರಿಗಾಗಿ ಅಕ್ಕಿಪೇಟೆ, ಬಳೇಪೇಟೆ, ತರಗುಪೇಟೆ, ನಗರತಪೇಟೆ, ಉಪ್ಪಾರಪೇಟೆಗಳನ್ನು ನಿರ್ಮಿಸಿ ವ್ಯಾಪಾರ ವ್ಯವಹಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದರು ಎಂದು ಸ್ಮರಿಸಿದರು.
ತಾಪಂ ಇಒ ಪಿ.ಆರ್.ಗೋಪಾಲ್ ಮಾತನಾಡಿ, ಕೆಂಪರಾಜೇಗೌಡರು ವಿಜಯನಗರ ಸಾಮ್ರಾಜ್ಯದಲ್ಲಿ ಸಾಮಂತ ರಾಜರಾಗಿದ್ದರು. ಹಂಪಿ ವೈಭವವನ್ನು ನೋಡಿದ್ದ ಇವರು ಬೆಂಗಳೂರನ್ನು ಅದೇ ರೀತಿಯಲ್ಲಿ ಅಭಿವೃದ್ಧಿಪಡಿಸುವ ಇಚ್ಛೆಯನ್ನು ಹೊಂದಿದ್ದರು. 1528 ರಲ್ಲಿ ಕೆಂಪೇಗೌಡರಿಗೆ ಪಟ್ಟಾಭಿಷೇಕ ಆದ ನಂತರ 1532 ರಿಂದ 1537ರವರೆಗೆ ಬೆಂದಕಾಳೂರನ್ನು ಬೆಂಗಳೂರನ್ನಾಗಿ ಮಾಡಿದರು ಎಂದರು.
ತಹಸೀಲ್ದಾರ್ ಎಸ್. ವಿಶ್ವನಾಥ್, ಎಡಿಎಲ್ಆರ್ ಮಂಜೇಶ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಬಿಇಒ ಸೋಮಲಿಂಗೇಗೌಡ, ಮೀನುಗಾರಿಕೆ ಇಲಾಖೆಯ ಸುಮಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಪ್ನಾ, ಉದಯ್, ಲೋಕೇಶ್, ರೂಪೇಶ್, ಕಸಾಪ ತಾಲೂಕು ಅಧ್ಯಕ್ಷ ಆರ್.ಬಿ. ಪುಟ್ಟೇಗೌಡ, ವನಜಾಕ್ಷಿ, ವಕ್ಕಲಿಗ ಮುಖಂಡರಾದ ಜೈಪ್ರಕಾಶ್, ಕೆ.ಆರ್. ಸುದರ್ಶನ್ ಬಾಬು ಇತರರು ಇದ್ದರು.