

ಕಮಲನಗರ: ತನ್ನ ಹೊಲದಲ್ಲಿರುವ ತೊಗರಿಗೆ ತಗುಲಿರುವ ಗೊಡ್ಡು ರೋಗ ಇತರ ರೈತರ ಜಮೀನಿಗೆ ಹರಡಬಾರದು ಎಂಬ ಕಳಕಳಿಯೊಂದಿಗೆ ಡಿಗ್ಗಿ ಗ್ರಾಮದ ರೈತ ಮನ್ಮಥ 2.5 ಎಕರೆ ತೊಗರಿಯನ್ನು ಕಿತ್ತೆಸೆದು ಹೃದಯವೈಶಾಲ್ಯತೆ ಮೆರೆದಿದ್ದಾರೆ. ರೈತನ ಈ ಕಾರ್ಯವನ್ನು ಮೆಚ್ಚಿ ಬೀದರ್ ಕೃಷಿ ಅಧಿಕಾರಿಗಳ ಸಂಘ 25 ಸಾವಿರ ರೂ. ಧನಸಹಾಯ ನೀಡಿ ಬೆನ್ನು ತಟ್ಟಿದೆ.
ತನ್ನ ಜಮೀನಿನಲ್ಲಿನ ತೊಗರಿಗೆ ಗೊಡ್ಡು ರೋಗ ಹರಡಿರುವ ಕುರಿತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ತಾಲೂಕು ಕೃಷಿ ಅಧಿಕಾರಿ ಸುನೀಲ ಬಿರಾದಾರ ಗಮನಕ್ಕೆ ತಂದಿದ್ದಾರೆ. ಜಮೀನಿಗೆ ಭೇಟಿ ನೀಡಿದ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಕೂಡಲೇ ತೊಗರಿ ಕಿತ್ತಿ ಗುಂಡಿ ತೋಡಿ ಮುಚ್ಚಿ ಹಾಕುವಂತೆ ಸೂಚಿಸಿದ್ದರು. ಅದರಂತೆ ಮನ್ಮಥ ಕ್ರಮ ಕೈಗೊಂಡು, ಇಡೀ ಗ್ರಾಮದ ಸುಮಾರು 500 ಎಕರೆ ತೊಗರಿ ಬೆಳೆಗೆ ಹರಡಬಹುದಾಗಿದ್ದ ರೋಗವನ್ನು ತಡೆಹಿಡಿದು ಲಕ್ಷಾಂತರ ರೂ. ಹಾನಿ ತಪ್ಪಿಸಿದ್ದಾರೆ.
ತೊಗರಿ ಬೆಳೆ ರಕ್ಷಿಸಿದ ರೈತ ಮನ್ಮಥಗೆ ಬೀದರ್ ಜಿಲ್ಲೆಯ ಕೃಷಿ ಅಧಿಕಾರಿಗಳ ಸಂಘದ ಪರವಾಗಿ ಮಂಗಳವಾರ ಕೃಷಿ ಅಧಿಕಾರಿ ಸುನೀಲ ಬಿರಾದಾರ 25000 ಸಾವಿರ ರೂ. ಧನಸಹಾಯ ನೀಡಿದ್ದಾರೆ.
ಆಸೇರಿಯಾ ಕೆಜಿನಿಯಾ ಗುಂಪಿಗೆ ಸೇರಿದ ಸೂಕ್ಷ್ಮ ಜೀವಿಯಾದ ಗೊಡ್ಡು ಗೋಗದ ನುಶಿ ಎರಡು ಕಿಮೀನಷ್ಟು ದೂರ ಗಾಳಿ ಮೂಲಕ ತೊಗರಿಗೆ ಬಾಧಿಸುತ್ತದೆ. ಹೀಗಾಗಿ ಡಿಗ್ಗಿ ಗ್ರಾಮದ ರೈತ ಮನ್ಮಥ ಅವರ ತೊಗರಿ ಕಿತ್ತು ಹಾಕಲು ಹೇಳಿದ್ದೇವು. ಅದರಂತೆ ಕ್ರಮ ಕೈಗೊಂಡಿದ್ದಾರೆ. ರೋಗ ತಡೆಗೆ ಎರಡೂವರೆ ಮಿಲೀ ಡೈಕೋಪಾಲ್ ನುಶಿನಾಶಕ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.| ಸುನೀಲ ಬಿರಾದಾರಕೃಷಿ ಅಧಿಕಾರಿ ಕಮಲನಗರ