ತನು, ಮನ ಶುದ್ಧವಾಗಿದ್ದರೆ ಮಹದೇವ ಒಲಿಯಲು ಸಾಧ್ಯ

Tanu, if the mind is pure, Mahadev can be worshipped
Published on

ಸವಣೂರ: ದೇವಸ್ಥಾನ ನಿರ್ಮಾಣ ಮಾಡಿ ಅಲಂಕರಿಸಿದಂತೆ, ನಮ್ಮ ಶರೀರವನ್ನು ದೇವಸ್ಥಾನದಂತೆ ನಿರ್ಮಾಣ ಮಾಡಿಕೊಳ್ಳಲು ದುಶ್ಚಟಗಳಿಂದ ದೂರಾಗುವುದು ಅವಶ್ಯವಾಗಿದೆ ಎಂದು ಶಿರಹಟ್ಟಿ ಸಂಸ್ಥಾನ ಮಠದ ಜಗದ್ಗುರು ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.

ತಾಲೂಕಿನ ನಂದಿಹಳ್ಳಿ ಗ್ರಾಮದ ಶ್ರೀ ಆದಿಶಕ್ತಿ ಹೊನ್ನಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ದುಶ್ಚಟಗಳನ್ನು ಬಿಟ್ಟು ಮನಸನ್ನು ಶುದ್ಧವಾಗಿಟ್ಟುಕೊಂಡರೆ ಮಹದೇವನನ್ನು ಒಲಿಸಿಕೊಳ್ಳಲು ಸಾಧ್ಯ. ಮಹದೇವನ ಕರುಣೆ ನಮಗೆ ಒಲಿಯಬೇಕಾದರೆ ತನು, ಮನ, ಧನ ಶುದ್ಧವಾಗಿರಬೇಕು. ಒಳ್ಳೆಯ ಮನಸಿನಿಂದ ಪ್ರಾರ್ಥಿಸಿದಾಗ ದೇವರು ಒಲಿದು ನಮ್ಮ ಕಷ್ಟಗಳನ್ನು ದೂರ ಮಾಡುತ್ತಾನೆ. ಪ್ರತಿಯೊಬ್ಬರೂ ಗ್ರಾಮದೇವಿ ಹೊನ್ನಮ್ಮನಲ್ಲಿ ಒಳ್ಳೆಯ ಮನಸಿನಿಂದ ಬೇಡಿಕೊಂಡು ಸಂಕಷ್ಟಗಳಿಂದ ಮುಕ್ತಿ ಪಡೆದು ಉತ್ತಮ ಜೀವನಕ್ಕೆ ಮುಂದಾಗಬೇಕು ಎಂದರು.

ಪ್ರಾಚಾರ್ಯ ಶೇಖರ ಸಜ್ಜನ ಪಾಸ್ತಾವಿಕವಾಗಿ ಮಾತನಾಡಿದರು. ಬಂಕಾಪೂದ ಜಾನಪದ ಕಲಾವಿದ ಜಗದೀಶ ಹುಳ್ಳಿ ಅವರಿಂದ ಗ್ರಾಮ ಹಾಗೂ ಗ್ರಾಮದೇವಿಯ ಕುರಿತು ಮಾತನಾಡಿದರು. ಜಾತ್ರಾ ಸಮಿತಿ ಪದಾಕಾರಿಗಳು ಪ್ರಮುಖರು ಪಾಲ್ಗೊಂಡಿದ್ದರು.

ಬೆಳಗ್ಗೆ ಆದಿಶಕ್ತಿ ಹೊನ್ನಮ್ಮದೇವಿಗೆ ಅಭಿಷೇಕ, ಮಹಾಪೂಜೆ, ಪುಷ್ಪಾಲಂಕಾರ, ಕುಂಭಪೂಜೆ ಕಾರ್ಯಕ್ರಮ ಮಂತ್ರೋಡಿಯ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ತೆಗ್ಗಿಹಳ್ಳಿಯ ವೇ. ಬಸವಣ್ಣಯ್ಯ ಹಿರೇಮಠ ಅವರಿಂದ ನೆರವೇರಿತು. ನಂತರ ಮಹಿಳೆಯರ ಪೂರ್ಣ ಕುಂಭಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಡೊಳ್ಳು, ಜಾಂಜ್ ಮೇಳ ಸೇರಿದಂತೆ ಸಕಲ ವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ಸಾಗಿ ದೇವಸ್ಥಾನ ತಲುಪಿ ಸಂಪನ್ನಗೊಂಡಿತು.

ಆದಿಶಕ್ತಿ ಹೊನ್ನಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ. 19ರಂದು ದೇವಿಗೆ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯ ಜರುಗುವುವು. ನಂತರ ಜಿಲ್ಲಾ ರಕ್ತ ಭಂಡಾರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ನಂದಿಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಸಂಜೆ ಶಿಗ್ಗಾಂವಿ ತಾಲೂಕಿನ ಕಬನೂರ ಗ್ರಾಮದ ಶ್ರೀ ಅಲ್ಲಿಕೇರಿ ಬಸವೇಶ್ವರ ಸಾಂಸ್ಕೃತಿಕ ಕಲಾ ತಂಡದ ವತಿಯಿಂದ ‘ಜಾನಪದ ಉತ್ಸವ’ ಕಾರ್ಯಕ್ರಮ ಜರುಗಲಿದೆ. ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಮುಖರು ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net