

ಧಾರವಾಡ: ಕರೊನಾ ಪೀಡಿತ ಚಿಕಿತ್ಸೆಗೆ ತೆರಳುವ ವೈದ್ಯರು ಮತ್ತು ಇತರ ಸಿಬ್ಬಂದಿ ವರ್ಗದವರಿಗೆ ಅಗತ್ಯವಿರುವ ಪಿಪಿಇ ಕಿಟ್ ಹಾಗೂ ಇತರ ಸಲಕರಣೆಗಳ ಖರೀದಿಯಲ್ಲಿ ಗೋಲ್ಮಾಲ್ ನಡೆದಿರುವ ಕುರಿತು ವಿಜಯವಾಣಿಯಲ್ಲಿ ಬುಧವಾರ ಪ್ರಕಟವಾದ ವರದಿ ಭಾರಿ ಸಂಚಲನ ಮೂಡಿಸಿದೆ.
ಈ ಹಗರಣದ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ರಾಜಕೀಯ ಪಕ್ಷದವರು, ಸಾರ್ವಜನಿಕರು, ಕೆಲವು ವೈದ್ಯರು ಸಹ ಅಭಿಪ್ರಾಯಪಟ್ಟಿದ್ದಾರೆ.
ಈ ಮಧ್ಯೆ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಪ್ರತಿಕ್ರಿಯಿಸಿ, ಪಿಪಿಇ ಕಿಟ್, ಇತರ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರವಾಗಿದೆಯೇ ಎಂದು ಕೂಲಂಕಷವಾಗಿ ವಿಚಾರಿಸಲು ಜಿಲ್ಲಾಧಿಕಾರಿಯವರಿಗೆ ಸೂಚಿಸುತ್ತೇನೆ. ಹಾಗೇನಾದರೂ ಅಧಿಕ ದರ ಪಾವತಿಸಿದ್ದರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರತಿಕ್ರಿಯಿಸಿ, ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ, ಕರೊನಾ ಆಸ್ಪತ್ರೆಗೆ ಅಗತ್ಯವಿರುವ ವಸ್ತುಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಪತ್ರಿಕೆಯಲ್ಲಿ ಬಂದಿರುವ ವರದಿಯು, ಈ ಹಿಂದೆ ನಾವು ಮಾಡಿದ್ದ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ. ಹಿಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್ ಅವಧಿಯಲ್ಲಿ ಈ ಅವ್ಯವಹಾರ ನಡೆದಿರುವುದು ಈಗ ಬಯಲಾಗುತ್ತಿದೆ. ಜನ ಕೋವಿಡ್-19 ಭೀತಿಯಿಂದ ಸಂಕಷ್ಟದಲ್ಲಿರುವ ಸಮಯದಲ್ಲಿ ಹಣ ಲೂಟಿ ಮಾಡಿರುವುದು, ಅಧಿಕಾರಿಗಳಿಗೆ ಮಾನವೀಯತೆ ಇಲ್ಲ ಎಂಬುದಕ್ಕೆ ನಿದರ್ಶನ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಸಮಗ್ರ ತನಿಖೆ ಮಾಡಿಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸೇಕು ಎಂದು ಅವರು ಆಗ್ರಹಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಜರ್ ಇತ್ಯಾದಿ ವಸ್ತುಗಳ ಖರೀದಿಯಲ್ಲಿ ಅವ್ಯವಹಾರವಾಗಿರುವ ಬಗ್ಗೆ ಅನುಮಾನಗಳಿದ್ದವು. ವಿಜಯವಾಣಿ ರಿಯಾಲಿಟಿ ಚೆಕ್ ವರದಿಯಿಂದ ಅದು ದೃಢಪಟ್ಟಿದೆ ಎಂದಿರುವ ಸಂಯುಕ್ತ ಜನತಾ ದಳ (ಜೆಡಿಯು) ಜಿಲ್ಲಾಧ್ಯಕ್ಷ ಶ್ರೀಶೈಲಗೌಡ ಪಾಟೀಲ ಕಮತರ, ಸೂಕ್ತ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಟೇಷನ್ ಪಡೆದು ಖರೀದಿ ಮಾಡುವಾಗ ಅಧಿಕಾರಿಗಳು ಪಿಪಿಇ ಕಿಟ್ಗಳ ಮೂಲ ಉತ್ಪಾದಕರ ಬಳಿಯೂ ವಿಚಾರಿಸಬಹುದಿತ್ತು. ಬೇರೆ ಜಿಲ್ಲೆ ಮತ್ತು ರಾಜ್ಯದಿಂದಲೂ ಮಾಹಿತಿ ಪಡೆದುಕೊಳ್ಳಬಹುದಿತ್ತು. ಆದರೆ, ಅಂಥ ಪ್ರಯತ್ನ ನಡೆಸದೇ ಬೇಕಾಬಿಟ್ಟಿ ದರದಲ್ಲಿ ಕೊಂಡುಕೊಂಡಿದ್ದಾರೆ. ಸಾರ್ವಜನಿಕ ಹಣವನ್ನು ಬೇಜವಾಬ್ದಾರಿಯಿಂದ ಖರ್ಚು ಮಾಡಿದ್ದಾರೆ. ಈ ತಪ್ಪು ಮಾಡಿದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದಿದ್ದಾರೆ.
ಪಿಪಿಇ ಕಿಟ್, ಮಾಸ್ಕ, ವೈದ್ಯಕೀಯ ಸಲಕರಣೆ ಹಾಗೂ ಇತರ ಸುರಕ್ಷಾ ಪರಿಕರಗಳ ಖರೀದಿ ಪ್ರಕ್ರಿಯೆಯ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇದು ನನ್ನ ಅಧಿಕಾರಾವಧಿಗೂ ಮೊದಲು ನಡೆದಿರುವ ಪ್ರಕ್ರಿಯೆ. ಕೋವಿಡ್ ಆರಂಭದ ದಿನಗಳಲ್ಲಿ ಪಿಪಿಇ ಕಿಟ್ಗಳ ಅಭಾವವಿತ್ತು. ವಿರಳವಾಗಿ ಪೂರೈಕೆಯಾಗಿದ್ದವು. ಆಗಿನ ದರಕ್ಕೂ ಈಗಿನ ದರಕ್ಕೂ ತುಂಬಾ ವ್ಯತ್ಯಾಸವಾಗಿದೆ. ವಿಜಯವಾಣಿ ವರದಿ ಗಮನಕ್ಕೆ ಬಂದಿದ್ದು, ವಿಸ್ತ್ರತವಾಗಿ ಪರಿಶೀಲನೆ ನಡೆಸಲಾಗುವುದು. | ನಿತೇಶ ಪಾಟೀಲ, ಜಿಲ್ಲಾಧಿಕಾರಿ