

ಬಳ್ಳಾರಿ : ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಕ್ರಮ ಹಣ ಅವ್ಯವಹಾರ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ವಿಧಾನಪರಿಷತ್ ಸಚೇತಕ ರವಿಕುಮಾರ್ ಒತ್ತಾಯಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ತನಿಖೆಯನ್ನು ಸರ್ಕಾರ ಸಿಒಡಿ ವಹಿಸಿದೆ, ಅದರ ಮೇಲೆ ನಂಬಿಕೆಯಿಲ್ಲ ಆದ್ದರಿಂದ ಸಿಬಿಐಗೆ ವಹಿಸಬೇಕು. ಈ ಪ್ರಕರಣದಲ್ಲಿ ಒಬ್ಬ ದಕ್ಷ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆ ನಡೆಯುವ ವೇಳೆ ಸಚಿವರು ಪ್ರಕರಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ, ನೈತಿಕ ಹೊಣೆ ಒತ್ತು ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕು. ಜೂನ್ 6 ರವರೆಗೆ ಸರ್ಕಾರಕ್ಕೆ ಗಡುವು ನೀಡಲಿದ್ದು, ರಾಜೀನಾಮೆ ನೀಡದಿದ್ದರೆ ಜೂ. 7 ರಂದು ರಾಜ್ಯಾದ್ಯಂತ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು. ನಿಗಮದ ಹಣ ತೆಲಂಗಾಣಕ್ಕೆ ವರ್ಗಾವಣೆಯಾಗಿದೆ ಎಂದಾದರೆ ಸಿಎಂ, ಡಿಸಿಎಂ ಆದೇಶವಿದೆ. ಈ ಪ್ರಕರಣದಲ್ಲಿ ಮಂತ್ರಿಗಳು, ದೊಡ್ಡ ದೊಡ್ಡ ಹುದ್ದೆಯ ಸರ್ಕಾರಿ ಅಧಿಕಾರಿಗಳು ಶಾಮೀಲು ಆಗಿದ್ದಾರೆ. ಇದಲ್ಲದೆ ಗೃಹ ಮಂತ್ರಿ ಪರಮೇಶ್ವರ ಹಾಗೂ ಪ್ರಿಯಾಂಕ್ ಖರ್ಗೆ ಸಚಿವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಆರೋಪಿಸಿದರು. ಈಗ ನಿಗಮಕ್ಕೆ ಹಣ ವಾಪಾಸ್ಸು ಬರುತ್ತಿದೆ. ಆದರೆ, ಮೃತರಾದ ಅಧಿಕಾರಿ ಕುಟುಂಬಕ್ಕೆ ನ್ಯಾಯ ಸಿಗುತ್ತಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ವಿವಿಧ ಕಡೆ ಕೊಲೆ ಸುಲಿಗೆ ನಡೆಯುತ್ತಿವೆ ಎಂದರು. ಈಶಾನ್ಯ ಪದವಿಧರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಚಂದ್ರಶೇಖರ ಪಾಟೀಲ್ ವಿಧಾನಪರಿಷತ್‌ನಲ್ಲಿ ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಪ್ರಶ್ನೆಯು ಎತ್ತಿಲ್ಲ. ಆದ್ದರಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ವೈ.ಎಂ. ಸತೀಶ್, ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ಎಂ.ಎಸ್. ಸೋಮಲಿಂಗಪ್ಪ, ಸುರೇಶಬಾಬು, ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಮೋಕಾ, ಮುಖಂಡರಾದ ರಾಜೀವ್ ತೊಗರಿ, ರಾಮಲಿಂಗಪ್ಪ, ಹನುಮಂತಪ್ಪ ,ಮಲ್ಲೇಶ ಇದ್ದರು.