

ಕಾರವಾರ: ಕಾರವಾರ, ಬೇಲೆಕೇರಿ ಬಂದರು ಅಭಿವೃದ್ಧಿಗೆ ತಯಾರಿ ನಡೆಸಿರುವ ಸರ್ಕಾರ ತದಡಿ ಬಂದರು ಅಭಿವೃದ್ಧಿ ಯೋಜನೆಯನ್ನು ಅಧಿಕೃತವಾಗಿ ಕೈಬಿಟ್ಟಿದೆ. ತದಡಿ ಬಂದರು ನಿರ್ಮಾಣ ಸಂಬಂಧ ಕೇಂದ್ರ ಪರಿಸರ ಇಲಾಖೆಯಲ್ಲಿ ಸಲ್ಲಿಸಿದ್ದ ಅನುಮತಿ ಅರ್ಜಿಯನ್ನು ಈ ವರ್ಷದ ಮೇ ಹೊತ್ತಿಗೆ ಅಧಿಕೃತವಾಗಿ ರದ್ದು ಮಾಡಲಾಗಿದೆ. ಕೇಂದ್ರ ಅರಣ್ಯ, ಪರಿಸರ ಹಾಗೂ ವಾತಾವರಣ ಬದಲಾವಣೆ ಸಚಿವಾಲಯದ ವೆಬ್ಸೈಟ್ನಲ್ಲಿ ಈ ಕುರಿತು ಅಧಿಕೃತವಾಗಿ ಮಾಹಿತಿ ಪ್ರಕಟಿಸಲಾಗಿದೆ.
ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತದಡಿಯ 1420 ಎಕರೆ ಪ್ರದೇಶದಲ್ಲಿ 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಬಂದರನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲು ಸರ್ಕಾರ ಯೋಜಿಸಿತ್ತು. 2009ರಿಂದ ತಯಾರಿ ನಡೆಸಿದ್ದ ಸರ್ಕಾರ 2011ರಲ್ಲಿ ಈ ಸಂಬಂಧ ಪರಿಸರ ಅಧ್ಯಯನಕ್ಕಾಗಿ ಅಧಿಕೃತವಾಗಿ ಅನುಮೋದನೆ ಪಡೆದಿತ್ತು.
ಬಂದರು ನಿರ್ವಣದ ಜವಾಬ್ದಾರಿ ಹೊತ್ತ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ತದಡಿ ಬಂದರು ಲಿಮಿಟೆಡ್ ಎಂಬ ಕಂಪನಿ ರಚಿಸಿ 5 ಲಕ್ಷ ರೂ. ಷೇರು ಬಂಡವಾಳ ಹಾಕಿ ಪೂರ್ವ ತಯಾರಿ ನಡೆಸಿತ್ತು. 7 ಬರ್ತ್ಗಳನ್ನು ನಿರ್ಮಾಣ ಮಾಡಿ ಪ್ರತಿ ವರ್ಷ 34.20 ಮಿಲಿಯನ್ ಮೆಟ್ರಿಕ್ ಟನ್ಗಳಷ್ಟು, ಕಲ್ಲಿದ್ದಲು, ಕಬ್ಬಿಣದ ಅದಿರು ಸೇರಿ ಹಲವು ಸಾಮಗ್ರಿಗಳ ಆಮದು- ರಫ್ತು ನಡೆಸುವ ಯೋಜನೆ ರೂಪಿಸಿತ್ತು. 2015ರಲ್ಲಿ ಬಂದರು ನಿರ್ಮಾಣ ಸಂಬಂಧ ಸಾರ್ವಜನಿಕ ಅಹವಾಲು ಸಭೆ ನಡೆದಿತ್ತು. ಪರ, ವಿರೋಧ ಎರಡೂ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ತದಡಿ ಬಂದರು ನಿರ್ಮಾಣ ಸಂಬಂಧ ಕೇಂದ್ರ ಪರಿಸರ ಮಂತ್ರಾಲಯ ಪ್ರಾಥಮಿಕ ಅನುಮೋದನೆ ನೀಡಿತ್ತು. ಆದರೆ, ಎರಡನೇ ಹಂತದ ಅನುಮೋದನೆ ನೀಡಬೇಕಾದರೆ ಮರು ಪರಿಸರ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಈ ನಡುವೆ ಬಂದರು ನಿರ್ವಣಕ್ಕೆ ಹೂಡಿಕೆದಾರರು ಮುಂದೆ ಬಾರದ ಕಾರಣ ಕೆಎಸ್ಐಐಡಿಸಿ ಹೆಚ್ಚಿನ ಅಧ್ಯಯನ ಮಾಡಲು ಮುಂದಾಗಿಲ್ಲ. ತಮಗೆ ಯಾವುದೇ ಅನುಮತಿಯ ಅವಶ್ಯಕತೆ ಇಲ್ಲ. ಯೋಜನೆಯನ್ನು ರದ್ದು ಮಾಡಲಾಗಿದೆ ಎಂದು ಕೆಎಸ್ಐಐಡಿಸಿ ತಿಳಿಸಿದ ಹಿನ್ನೆಲೆಯಲ್ಲಿ ಪರಿಸರ ಇಲಾಖೆ ಪ್ರಸ್ತಾವನೆಯನ್ನು ವೆಬ್ಸೈಟ್ನಿಂದ ಅಳಿಸಿ ಹಾಕಿದೆ.
ಬೇಲೆಕೇರಿ ಅಭಿವೃದ್ಧಿ:
ಕಾರವಾರ, ಬೇಲೆಕೇರಿ ಬಂದರಿನ ಅಭಿವೃದ್ಧಿಗೆ ಸಾಗರ ಮಾಲಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಒತ್ತು ನೀಡಿದೆ. ಕಾರವಾರ ಬಂದರು ಅಭಿವೃದ್ಧಿಗೆ ಹೆಚ್ಚುವರಿ ಅಲೆ ತಡೆಗೋಡೆ ನಿರ್ಮಾಣ ಹಾಗೂ ಬರ್ತ್ ವಿಸ್ತರಣೆ ಕಾರ್ಯಕ್ಕೆ ಚಾಲನೆ ನೀಡಿದ್ದು, ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಹಾಗೂ ಕೆಲವು ಅನುಮತಿ ಪಡೆಯದ ಕಾರಣ ಹೈಕೋರ್ಟ್ ಕಾಮಗಾರಿಗೆ ತಡೆ ನೀಡಿದೆ. ಇನ್ನು ಬೇಲೆಕೇರಿ ಬಂದರಿಗೆ ಸಮರ್ಪಕ ರಸ್ತೆ ಹಾಗೂ ರೈಲ್ವೆ ಸಂಪರ್ಕ ಒದಗಿಸುವತ್ತ ಮೊದಲ ಆದ್ಯತೆ ನೀಡಲಾಗಿದೆ. ಹಾವೇರಿ - ಶಿರಸಿ - ಕುಮಟಾ - ಬೇಲೆಕೇರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಗಿದ್ದು, ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿದೆ. ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63 ರ ಷಟ್ಪಥ ಕಾಮಗಾರಿ, ಬೇಲೆಕೇರಿ ಬಂದರಿಗೆ ರೈಲ್ವೆ ಸಂಪರ್ಕ ಕಾಮಗಾರಿಗೆ ಇನ್ನಷ್ಟೇ ಚಾಲನೆ ದೊರೆಯಬೇಕಿದೆ.
ವಿಚಾರಣೆ ಮುಂದಕ್ಕೆ
ಕಾರವಾರ ಬಂದರಿನ ವಿಸ್ತರಣೆ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಡಿ.16 ಕ್ಕೆ ಮುಂದೂಡಿದೆ. ‘ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರ ಅಧಿಕಾರಿಗಳು ಬಂದರು ಕಾಮಗಾರಿಗೆ ನೀಡಿದ್ದ ಪರವಾನಗಿಯ ವಿಚಾರವನ್ನು ರಾಜ್ಯ ಮಂಡಳಿಯ ಎದುರು ಇಡಲಾಗಿದೆ. ರಾಜ್ಯಮಟ್ಟದಲ್ಲಿ ಹೊಸ ನಿರ್ಣಯ ಕೈಗೊಳ್ಳಲಾಗುವುದು ಎಂದು ಮಂಡಳಿಯ ಪರ ವಕೀಲರು ಕೋರ್ಟ್ಗೆ ಮಾಹಿತಿ ನೀಡಿದರು. ಬಂದರು ವಿಸ್ತರಣೆ ವಿರೋಧಿಸಿ ಬೈತಖೋಲ್ ಮೀನುಗಾರರ ಸಂಘಟನೆಯೊಂದು ಹೈಕೋರ್ಟ್ ಮೊರೆ ಹೋಗಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪತ್ರವಿಲ್ಲದೇ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಆಕ್ಷೇಪಿಸಿತ್ತು. ಅದೇ ಆಧಾರದ ಮೇಲೆ ಜ.23 ರಂದು ಹೈಕೋರ್ಟ್ ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು. ಈ ನಡುವೆ ಜೂನ್ ತಿಂಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕಾಮಗಾರಿಗೆ ಅನುಮತಿ ಪತ್ರ ನೀಡಿದ್ದು ತಡೆಯಾಜ್ಞೆ ತೆರವು ಮಾಡುವಂತೆ ಬಂದರು ಇಲಾಖೆ ಕೋರ್ಟ್ಗೆ ಮನವಿ ಮಾಡಿತ್ತು. ಈ ವಿಚಾರವಾಗಿಯೇ ಕೋರ್ಟ್ನಲ್ಲಿ ವಿಚಾರಣೆ ಮುಂದುವರಿದಿದೆ.