ತದಡಿ ಬಂದರಲ್ಲಿ ಹೂಳು

24gkn1-a3=
Published on

ಗೋಕರ್ಣ: ಜಿಲ್ಲೆಯ ಶುಕ್ರದೆಸೆಯ ಬಂದರು ಎಂಬ ಪಟ್ಟ ಪಡೆದ ತದಡಿಗೆ ಈಗ ವಕ್ರದೆಸೆ ಬಂದಿದೆ.

ಹೊರ ಜಿಲ್ಲೆ ಮತ್ತು ಬಂದರುಗಳಿಂದ ಬರುತ್ತಿದ್ದ ಬೋಟ್​ಗಳು ತದಡಿ ತೊರೆದವು. ಸಮಸ್ಯೆಯಿಂದ ನಲುಗಿದ ಸ್ಥಳೀಯ ಅನೇಕ ಮೀನುಗಾರರು ತಮ್ಮತಮ್ಮ ಬೋಟ್​ಗಳನ್ನು ಮಾರಿದರು. ಇದಕ್ಕೆ ಕಾರಣ ತೂಫಾನ್, ಪ್ರವಾಹ, ಸೈಕ್ಲೋನ್ ಮುಂತಾದ ಪ್ರಕೃತಿ ವಿಕೋಪವಲ್ಲ, ಮೀನು ಕ್ಷಾಮದ ನೈಸರ್ಗಿಕ ದುಷ್ಪರಿಣಾಮವೂ ಅಲ್ಲ, ಬಂದರಿನ ವ್ಯವಹಾರದಲ್ಲಿ ಇಳಿಕೆ ಉಂಟಾಗಲು ಮುಖ್ಯ ಕಾರಣ, ಬಂದರಿನ ಧಕ್ಕೆಯಿಂದ ಅಳಿವೆ ಬಾಯಿಯ ವರೆಗಿನ ಅಂದಾಜು ಒಂದು ಕಿಮಿ ವ್ಯಾಪ್ತಿಯಲ್ಲಿ ತುಂಬಿಕೊಂಡಿರುವ ಬೃಹತ್ ಪ್ರಮಾಣದ ಹೂಳು!

ತದಡಿ ಮೀನುಗಾರಿಕೆ ಬಂದರಿಗೆ ದೇಶದ ಸುರಕ್ಷಿತ ನೈಸರ್ಗಿಕ ಬಂದರು ಎಂಬ ಪಟ್ಟವನ್ನು ಬ್ರಿಟಿಷ್ ಆಡಳಿತ ನೀಡಿತ್ತು. ಆ ಕಾಲದಲ್ಲಿ ರಾಜ್ಯದ ಪ್ರಮುಖ ಸರಕು ಸಾಗಣೆಯ ಬಂದರಾಗಿ ಹೆಸರಾಗಿದ್ದ ತದಡಿ ಸ್ವಾತಂತ್ರ್ಯ ತರುವಾಯ ಅಭಿವೃದ್ಧಿಶೀಲ ಮೀನುಗಾರಿಕೆ ಬಂದರಾಗಿ ಮಾತ್ರ ಉಳಿಯಿತು. ಮೀನುಗಾರರ ಹಿರಿಯ ಮುಖಂಡ ದಿವಂಗತ ಹ.ದೇ.ಮೂಡಂಗಿ ಅವರ ಪರಿಶ್ರಮ ಮತ್ತು ದೂರದೃಷ್ಟಿಯಿಂದ 70ರ ದಶಕದಲ್ಲಿ ಆಧುನಿಕ ರೂಪ ಪಡೆದ ತದಡಿ ಬಂದರು ಮೀನುಗಾರಿಕೆಯಲ್ಲಿ ಏರುಗತಿಯನ್ನು ಪಡೆಯುತ್ತ ಬಂದಿತು. ಉತ್ತರ ಕನ್ನಡದಲ್ಲಿ ಮೀನುಗಾರಿಕೆಯ ಪ್ರಧಾನ ಬಂದರಾಗಿಯೂ ಹೆಸರು ಗಳಿಸಿ ಜಿಲ್ಲೆಯ ಬೇರೆ ಕಡೆಗಳಿಂದ ಬೋಟ್​ಗಳು ತದಡಿಯನ್ನು ಆಶ್ರಯಿಸಲಾರಂಭಿಸಿದವು. ಇದರಿಂದ ಬಂದರಿನ ಒಟ್ಟಾರೆ ವಾರ್ಷಿಕ ಆದಾಯ ಹಲವು ಕೋಟಿ ರೂ. ಗೆ ಮುಟ್ಟಿತು. ಆದರೆ ಕಳೆದ ದಶಕದಿಂದೀಚೆಗೆ ಬಂದರಿನ ಶುಕ್ರದೆಸೆಗೆ ಗ್ರಹಣ ಹಿಡಿದು ಕಳೆದ ವರ್ಷದಿಂದ ಬಂದರಿನ ಒಟ್ಟೂ ಆದಾಯ ಹಿಂದಿನ ಅರ್ಧಾಶಕ್ಕಿಂತ ಕಡಿಮೆಯಾಯಿತು.

ಅಳಿವೆಯಲ್ಲಿದೆ ಬೃಹತ್ ದಿಬ್ಬದ ಪರ್ವತ: ಅಘನಾಶಿನಿ ನದಿ ಸಮುದ್ರವನ್ನು ಸೇರುವ ಅಳಿವೆ ಪ್ರದೇಶದ ಅಂದಾಜು 500ಮೀ. ಗೂ ಹೆಚ್ಚಿನ ಭಾಗದಲ್ಲಿ ಎತ್ತರದ ಹೂಳಿನ ಮಹಾಪರ್ವತವೇ ನಿರ್ವಣವಾಗಿದೆ. 2008ರಲ್ಲಿ ಇದು ಮೊದಲ ಬಾರಿಗೆ ಗಮನ ಸೆಳೆಯಿತು.ಬಂದರನ್ನು ಪ್ರವೇಶಿಸುವ ಎರಡು ಮೀನುಗಾರಿಕೆ ಬೋಟ್​ಗಳು ಇದಕ್ಕೆ ಬಡಿದು ಒಂದೇ ಕುಟುಂಬದ ನಾಲ್ವರು ಮೀನುಗಾರರ ಜೀವಹಾನಿಯಾಯಿತು. ಎರಡೂ ಬೋಟ್ ದುರಸ್ತಿಯಾಗದ ರೀತಿಯಲ್ಲಿ ನಾಶವಾದವು. ಆ ನಂತರದಲ್ಲಿ ಪ್ರತಿ ಮೀನುಗಾರಿಕೆ ವೇಳೆ ಹಲವು ಬೋಟ್​ಗಳಿಗೆ ಹಾನಿಯಾಗುವುದು ಸಾಮಾನ್ಯವಾಯಿತು ಎಂಬುದು ಮೀನುಗಾರರ ಸಂಘದ ಅಳಲಾಗಿದೆ.

ಬೋಟೂ ಇಲ್ಲ ನೋಟೂ ಇಲ್ಲ: ಅಳಿವೆ ಆತಂಕದಿಂದ ಕಂಗೆಟ್ಟ ಬೇರೆ ಜಿಲ್ಲೆ ಮತ್ತು ಬೇರೆ ಬಂದರಿನಿಂದ ನಿರಂತರವಾಗಿ ತದಡಿಗೆ ಬರುತ್ತಿದ್ದ ಮೀನುಗಾರಿಕೆ ಬೋಟ್​ಗಳು ಇಲ್ಲಿಗೆ ಬರುವುದನ್ನು ನಿಲ್ಲಿಸಿದವು. ಕಾರವಾರ, ಹೊನ್ನಾವರ, ಭಟ್ಕಳ, ಮುದಗಾ, ಉಡುಪಿ ಮುಂತಾದೆಡೆಗಳ 50ಕ್ಕೂ ಅಧಿಕ ಬೋಟ್​ಗಳಿಗೆ ತದಡಿ ವ್ಯಾವಹಾರಿಕ ನೆಲೆಯಾಗಿತ್ತು. ಅಳಿವೆ ದುರಂತ ಸಂಭವಿಸುವ ವರೆಗೂ ಈ ಬಂದರಿನಲ್ಲಿ ಕನಿಷ್ಠ 350ರಿಂದ 400 ವಿವಿಧ ಪ್ರಕಾರದ ಬೋಟ್​ಗಳು ಲಂಗರು ಹಾಕುತ್ತಿದ್ದವು. ಇಂದು ಇದರ ಸಂಖ್ಯೆ 200ರಿಂದ 250ಕ್ಕೆ ಇಳಿದಿದೆ. ಸಮಸ್ಯೆಗೆ ಬೇಸತ್ತು ಸ್ಥಳೀಯವಾಗಿದ್ದ 50ರಿಂದ 80 ಬೋಟ್​ಗಳನ್ನು ಮಾರಾಟ ಮಾಡಲಾಗಿದೆ.

ಅರ್ಧಕ್ಕಿಂತ ಕಡಿಮೆ ವಹಿವಾಟು: ಬಂದರಿನಲ್ಲಿರುವ ಮೀನುಗಾರಿಕೆ ಫೆಡರೇಷನ್ ಮತ್ತು ಮೀನುಗಾರರ ಸಹಕಾರಿ ಸಂಘದ ಆದಾಯ ಹಿಂದಿಗಿಂತ ಅರ್ಧಕ್ಕಿಂತ ಕೆಳಗಿಳಿಯಿತು. ಒಂದು ಸಮಯದಲ್ಲಿ 10 ಕೋಟಿ ರೂ. ಮೀರುತ್ತಿದ್ದ ಸಂಘದ ಆದಾಯ ಕಳೆದ ಸಾಲಿನಲ್ಲಿ ಕೇವಲ 4 ಕೋಟಿ ದಾಟಲು ಸಾಧ್ಯವಾಗಿಲ್ಲ. ಧಕ್ಕೆಯಲ್ಲಿರುವ ಡೀಸೆಲ್ ಬಂಕ್ ವಾರ್ಷಿಕವಾಗಿ 5ರಿಂದ 6 ಕೋಟಿ ರೂ. ವ್ಯವಹಾರ ನಡೆಸುತ್ತಿತ್ತು. ಇದು ಕಳೆದ ವರ್ಷ 2ಕೋಟಿ ರೂ.ಗೆ ತೃಪ್ತಿ ಪಟ್ಟಿದೆ.

ಎರಡನೇ ಹಂತದ ಯೋಜನೆ: ಈ ಕುರಿತು ಬಂದರು ಇಲಾಖೆ ಸ.ಇಂಜನಿಯರ್ ರಾಮದಾಸ ಆಚಾರಿ ವಿವರಣೆ ನೀಡಿ, ಸ್ಥಳೀಯ ಶಾಸಕ ದಿನಕರ ಶೆಟ್ಟಿಯವರ ಪರಿಶ್ರಮದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ನಿರ್ವಹಣೆಯ, 120 ಕೋಟಿ ರೂ. ಅಂದಾಜು ವೆಚ್ಚದ ಎರಡನೆ ಹಂತದ ಯೋಜನೆಯನ್ನು ಜಾರಿಗೆ ತರಲು ನಿರಂತರ ಪ್ರಯತ್ನಿಸಲಾಗುತ್ತಿದೆ. ಹೂಳಿನ ಬಗ್ಗೆ ಈಗಾಗಲೇ ಅಧ್ಯಯನ ಮತ್ತು ಸರ್ವೆಯನ್ನು ರಾಜ್ಯದ ತಜ್ಞರು ಮುಗಿಸಿದ್ದಾರೆ. ಈ ಯೋಜನೆಯ ಅನುಷ್ಠಾನದಿಂದ ತದಡಿ ಬಂದರಿನ ಹೂಳಿನ ಸಮಸ್ಯೆ ಸೇರಿದಂತೆ ಅನೇಕ ತೊಡಕುಗಳು ನಿವಾರಣೆ ಆಗಲಿವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ರಾಜ್ಯ ಸರ್ಕಾರ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಆದ್ಯ ಗಮನ ನೀಡುತ್ತಿದೆ. ತದಡಿ ಬಂದರನ್ನು ಆತಂಕಕ್ಕೆ ತಳ್ಳಿರುವ ಹೂಳಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ತಜ್ಞರಿಂದ ವಿಶೇಷ ಅಧ್ಯಯನ ಮತ್ತು ಸ್ಥಳದ ನೀರಿನ ಹರಿವು, ಹೂಳಿನ ಪ್ರಮಾಣದ ಸರ್ವೆ ಮುಗಿಸಲಾಗಿದೆ. ಕೋವಿಡ್​ನಿಂದ ಯೋಜನೆಯ ಜಾರಿಗೆ ವಿಳಂಬವಾಗುತ್ತಿದೆ. | ದಿನಕರ ಶೆಟ್ಟಿ, ಶಾಸಕ

ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ಆದಷ್ಟು ಬೇಗ ತದಡಿ ಬಂದರಿನ ಹೂಳಿನ ತೊಂದರೆ ನಿವಾರಣೆಗೆ ಮುಂದಾಗುವ ಅಗತ್ಯವಿದೆ .ಇಲ್ಲವಾದಲ್ಲಿ ಈಗಾಗಲೇ ಬಂದರಿನಿಂದ ದೂರಾಗುತ್ತಿರುವ ಮೀನುಗಾರಿಕೆ ಬೋಟ್​ಗಳ ಪ್ರಮಾಣ ಹೆಚ್ಚಾಗಿ ಮುಂದೊಂದು ದಿನ ಬಂದರು ಖಾಲಿಯಾಗ ಬಹುದಾದ ಸನ್ನಿವೇಶ ಎದುರಾಗುವ ಸಾಧ್ಯತೆ ದಟ್ಟವಾಗುತ್ತಿದೆ. ಮೀನುಗಾರ ಪ್ರಮುಖರ ಸಭೆ ನಡೆಸಿ ನಿಯೋಗದೊಂದಿಗೆ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. | ಉಮಾಕಾಂತ ಹೊಸ್ಕಟ್ಟ, ಅಧ್ಯಕ್ಷರು, ಮೀನುಗಾರರ ಸಹಕಾರಿ ಸಂಘ ತದಡಿ

ತದಡಿಯಲ್ಲಿನ ಹೂಳಿನ ಸಮಸ್ಯೆ ನಿವಾರಣೆಗೆ ಜಿಲ್ಲಾ ಮೀನುಗಾರರ ಫೆಡರೇಶನ್ ಎಲ್ಲ ಬಗೆಯ ಸಹಾಯ ಮಾಡಲಿದೆ. ಸ್ಥಳೀಯವಾಗಿರುವ ಯೂನಿಯನ್​ಗಳು, ಮೀನುಗಾರಿಕೆ ಸಂಘಟನೆಗಳು ಏಕತ್ರವಾಗಿ ನಿಂತು ಸರ್ಕಾರದ ಗಮನ ಸೆಳೆಯಲು ಸರ್ವ ಪ್ರಯತ್ನ ಮಾಡಲಾಗುವುದು.| ಮಹೇಶ ಮೂಡಂಗಿ, ಜಿಲ್ಲಾ ಮೀನುಗಾರಿಕೆ ಫೆಡರೇಷನ್ ನಿರ್ದೇಶಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net