

ಕೂಡ್ಲಿಗಿ: ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಬ್ರಹ್ಮರ್ಷಿ ನಾರಾಯಣಗುರು ಅವರಂತಹ ಸಮಾಜ ಸುಧಾರಕರ ಆದರ್ಶಗಳನ್ನು ನಾವೆಲ್ಲ ಪಾಲನೆ ಮಾಡಬೇಕಿದೆ ಎಂದು ಪಪಂ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಆರ್ಯ ಈಡಿಗ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಸೇರಿದಂತೆ ಅನೇಕ ಮಹನೀಯರು ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದರು. ಜನರಲ್ಲಿನ ಮೌಢ್ಯಗಳನ್ನು ತೊಡೆದು ಸರ್ವ ಧರ್ಮೀಯರು ಸಮಾನರು ಎಂದು ಪ್ರತಿಪಾದಿಸಿದರು. ನಾರಾಯಣಗುರು ಅವರ ತತ್ವಾದರ್ಶಗಳನ್ನು ಅನುಸರಣೆ ಮಾಡಿ ಸಮ ಸಮಾಜಕ್ಕೆ ಮುಂದಡಿ ಇಡಬೇಕೆಂದು ತಿಳಿಸಿದರು.
ಉಪನ್ಯಾಸ ವಿವೇಕಾನಂದ ಮಾತನಾಡಿ, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಘೋಷಣೆ ಮೂಲಕ ಸಮಾಜದಲ್ಲಿ ಕ್ರಾಂತಿಗೆ ನಾರಾಯಣಗುರು ನಾಂದಿ ಹಾಡಿದರು. ಶ್ರೀಲಂಕಾ ಸೇರಿದಂತೆ ವಿವಿಧೆಡೆ ಸಂಚರಿಸಿ ಜನರಲ್ಲಿನ ಮೇಲು-ಕೀಳು ಭಾವನೆಗಳನ್ನು ತೊಡೆದು ಹಾಕಿ, ಶಿಕ್ಷಣಕ್ಕೆ ಒತ್ತು ನೀಡಿದರು. ಶಿಕ್ಷಣದಿಂದ ಸಾಮಾಜಿಕ ಬದಲಾವಣೆಗೆ ಸಾಧ್ಯ. ಇಂತಹ ಮಹನೀಯರ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಚರಣೆ ಮಾಡಿದರೆ ಸಾಲದು. ಶಾಲೆ, ಕಾಲೇಜುಗಳಲ್ಲಿ ನಾರಾಯಣಗುರು ಅವರ ಕುರಿತು ಭಾಷಣ, ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿದರೆ ಅವರ ತತ್ವಗಳನ್ನು ಮುಂದಿನ ಪೀಳಿಗೆ ತಲುಪಿಸಲು ಸಾಧ್ಯ ಎಂದು ತಿಳಿಸಿದರು.
ಉಪ ತಹಸೀಲ್ದಾರ್ ಮದ್ದಿಲೇಟಿ, ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಒನಕೆ ಓಬವ್ಬ ಸಂಘದ ರಾಜ್ಯಾಧ್ಯಕ್ಷ ಹಿರೇಕುಂಬಳಗುಂಟೆ ಉಮೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸುನೀಲ್ ಗೌಡ, ಗುರುಸ್ವಾಮಿ, ಮೇಘನಾಬಾಬು, ಈಚಲ ಬೊಮ್ಮನಹಳ್ಳಿ ವೆಂಕಟೇಶ, ಶಿವರಾಮಪ್ಪ, ಸುರೇಶ್ ಬಾಬು, ಈ.ಧನಂಜಯ, ಈ.ಕೊಟ್ರೇಶ್, ನಾಗಲಾಪುರ ಚಂದ್ರು ವರದಪ್ಪ, ಕಡೇಕೊಳ ತಿಪ್ಪೇಸ್ವಾಮಿ ಇತರರಿದ್ದರು.