

ಚಿತ್ರದುರ್ಗ: ಹನ್ನೆರಡನೇ ಶತಮಾನದ ಶರಣರು ತತ್ವ, ಕಾಯಕ ನಿಷ್ಠರಾಗಿದ್ದರು ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವ ಕುಮಾರ ಸ್ವಾಮೀಜಿ ಹೇಳಿದರು.
ಮುರುಘಾ ಮಠದ ಶ್ರೀ ಮುರಿಗೆ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಅವರ ಲೀಲಾ ವಿಶ್ರಾಂತಿ ತಾಣದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿವಶರಣ ಬಿಬ್ಬಿ ಬಾಚಯ್ಯನವರ ಜಯಂತ್ಯುತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದರು.
ಕಂತಿ ಭಿಕ್ಷೆ ಮೂಲಕ ಹಸಿದವರಿಗೆ ಅನ್ನ ನೀಡುವಂತಹ ಮಾದರಿ ಕೆಲಸ ಮಾಡಿದ್ದ ಬಿಬ್ಬಿಬಾಚಯ್ಯ ದಾಸೋಹ ತತ್ವದ ಮೌಲ್ಯವನ್ನು ಸಾರಿದ್ದಾರೆ. ಶಿವಾನುಭವ ಗೋಷ್ಠಿಗಳ ಮೂಲಕ ಅನುಭಾವ ಹಂಚುವ, ನಗಿಸುವ ಕಾಯಕ ಮಾಡುತ್ತಿದ್ದರು ಎಂದರು.
ಗುರುಮಠಕಲ್‌ನ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಬಿಬ್ಬಿಬಾಚಯ್ಯ ಶರಣರು ಪವಾಡ ಮಾಡದಿದ್ದರೂ ಆ ಕಾಲಕ್ಕೆ ಅಂದಿನ ಜನರು ಅವರನ್ನು ಪವಾಡ ಪುರುಷ ಎಂದೇ ನಂಬಿದ್ದರು ಎಂದರು.
ಶಿರಸಂಗಿ ಬಸವ ಮಹಾಂತ ಸ್ವಾಮೀಜಿ, ಸಾದರಹಳ್ಳಿಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದ ತಿಪ್ಪೇರುದ್ರ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜಕಟ್ಟಿ, ಪ್ರಾ ಚಾರ್ಯ ಎಸ್.ವಿ. ರವಿಶಂಕರ್, ನಿವೃತ್ತ ಪ್ರಾಚಾರ್ಯ ಟಿ.ಪಿ. ಜ್ಞಾನಮೂರ್ತಿ, ಡಾ. ನವೀನ್ ಮಸ್ಕಲ್, ಎಸ್‌ಜೆಎಂ ಬ್ಯಾಂಕಿನ ರಾಜಶೇಖರ್, ಪ್ರಾಧ್ಯಾಪಕಿ ಜೆ. ಪ್ರತಿಮಾ, ಎಸ್‌ಜೆಎಂ ಐಟಿಐ ತರಬೇತಿ ಕೇಂದ್ರದ ವೈ.ಎ. ಯುವರಾಜ್, ಎಸ್. ಕೊಟ್ರೇಶ್, ಎಂ.ಎಲ್. ರಾಘವೇಂದ್ರ, ಮಾರುತಿ ಮತ್ತು ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.
ಭಕ್ತರು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ದಾಸೋಹ ಏರ್ಪಡಿಸಲಾಗಿತ್ತು. ಶ್ರೀಮಠದ ವಿದ್ಯಾರ್ಥಿಗಳು ಭಜನೆ, ಜಮುರಾ ಸಂಗೀತ ಕಲಾವಿದ ಉಮೇಶ್‌ಪತ್ತಾರ್, ಬಿಬ್ಬಿಬಾಚಯ್ಯನವರ ವಚನಗಳ ಗಾಯನ ನಡೆಸಿಕೊಟ್ಟರು. ಐಟಿಐ ಕಾಲೇಜಿನ ಎಂ. ವಿಶ್ವನಾಥ್ ಸ್ವಾಗತಿಸಿ, ವನಜಾಕ್ಷಿ ಜಗದೀಶ್ ವಂದಿಸಿದರು. ಎಸ್. ಸತೀಶ್ ನಿರೂಪಿಸಿದರು. ಎಸ್‌ಜೆಎಂ ಮುದ್ರಣಾಲಯದ ಬಿ. ಲೋಕೇಶ್ ಹಾಗೂ ಎಚ್.ಎಸ್. ಕೊಟ್ರೇಶ್ ಅವರನ್ನು ಸನ್ಮಾನಿಸಲಾಯಿತು.