ತಡೆಗೋಡೆ ನಿರ್ಮಿಸಿದಲ್ಲಿ ಪ್ರವಾಹಕ್ಕೆ ತಡೆ

27Kush03
ಕುಶಾಲನಗರ ಸಾಯಿ ಬಡಾವಣೆಯಲ್ಲಿ ಮಳೆ ನೀರು ನಿಂತಿರುವುದು
Published on

ಕುಶಾಲನಗರ: ಮಳೆಗಾಲ ಬಂತೆಂದರೆ ಕುಶಾಲನಗರ ಸಾಯಿ ಬಡಾವಣೆ ಸೇರಿದಂತೆ ನದಿ ತಟದ ನಿವಾಸಿಗಳು ಆತಂಕದಲ್ಲೇ ದಿನ ಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಅದನ್ನು ತಡೆಗಟ್ಟಲು ಕಾವೇರಿ ನದಿ ದಂಡೆಗೆ ಹೊಂದಿಕೊಂಡಂತೆ ತಡೆಗೋಡೆ ನಿರ್ಮಾಣ ಆಗಬೇಕು ಎಂದು ಸಾಯಿ ಬಡಾವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಗುರುವಾರ ಸಾಯಿಬಾಬಾ ದೇವಸ್ಥಾನ ಆವರಣದಲ್ಲಿ ಸ್ಥಳೀಯ ನಿವಾಸಿಗಳೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಮೇಲಿನ ಅಭಿಪ್ರಾಯ ವ್ಯಕ್ತವಾಯಿತು.

ಮುಳ್ಳುಸೋಗೆ, ಜನತಾ ಕಾಲನಿ ಸೇರಿದಂತೆ ಮೇಲ್ಭಾಗದಲ್ಲಿ ಇರುವ ಎಲ್ಲ ನೀರು ಸೋಮದೇವನ ಕೆರೆಗೆ ಬಂದು ಅಲ್ಲಿಂದ ಸಾಯಿ ಬಡಾವಣೆಯಲ್ಲಿ ಇರುವ ಕಾಲುವೆ ಮೂಲಕ ಕಾವೇರಿ ನದಿ ಸೇರುತ್ತದೆ. ಕಾಲುವೆ ತುಂಬ ಚಿಕ್ಕದಿದೆ. ಕಾಲುವೆ ನೈಸರ್ಗಿಕವಾಗಿ ಆಗಿರುವುದಲ್ಲ. ಬದಲಿಗೆ ಮಾನವ ನಿರ್ಮಿತ. ಕಾಲುವೆಗೆ ಕೆಲವರು ಮಣ್ಣು ಹಾಕಿ ಮುಚ್ಚಿದ್ದಾರೆ. ಅದರಿಂದ ಇರುವ ಸಣ್ಣ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಬಡಾವಣೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಸಾಯಿ ಬಡಾವಣೆ ನಿವಾಸಿ ನಂಜುಂಡಸ್ವಾಮಿ ಹೇಳುತ್ತಾರೆ.

ಎರಡು ವರ್ಷಗಳ ಹಿಂದೆ ಕಾವೇರಿ ನದಿಯಲ್ಲಿ ಹೂಳು ತುಂಬಿದೆ ಎಂದು ಲಕ್ಷಾಂತರ ರೂ. ವೆಚ್ಚ ಮಾಡಿ ಹೂಳು ತೆಗೆದರೂ ಏನೂ ಪ್ರಯೋಜನ ಕಾಣುತ್ತಿಲ್ಲ. ಈಗ ಕೆಲವರ ಅಭಿಪ್ರಾಯದಂತೆ ನದಿಯಲ್ಲಿ ಸಾಕಷ್ಟು ಮರಳು ಸಂಗ್ರಹವಾಗಿದೆ. ಅದನ್ನ ತೆಗೆದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗುವುದಿಲ್ಲ ಎನ್ನುತ್ತಾರೆ.

ಸಾಯಿ ಬಡಾವಣೆ ಮೂಲಕ ಹಾದು ಹೋಗುವ ರಾಜ ಕಾಲುವೆಯನ್ನು ಒತ್ತುವರಿದಾರರಿಂದ ತೆರುವುಗೊಳಿಸಿದ್ದರೂ ಸಾಕಷ್ಟು ಸಹಾಯವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಬಡಾವಣೆಯಲ್ಲಿ ಇತ್ತೀಚೆಗೆ ಯುಜಿಡಿ ಕಾಮಗಾರಿ ಮಾಡಿದ ಪರಿಣಾಮ ಇದ್ದ ಎಲ್ಲ ರಸ್ತೆಗಳು ಕಿತ್ತು ಹೋಗಿವೆ. ಮುಂದಿನ ದಿನಗಳಲ್ಲಿ ಅದನ್ನು ಮಾಡುವಾಗ ಇರುವ ಚರಂಡಿ ಗೋಡೆಯನ್ನು ಕನಿಷ್ಠ ಒಂದರಿಂದ ಎರಡು ಅಡಿ ಎತ್ತರಕ್ಕೆ ನಿರ್ಮಿಸಿ, ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದರೂ ಕೊಂಚ ನಿರಾಳರಾಗುತ್ತೇವೆ ಎಂದು ಶಿಲ್ಪಾ ಹೇಳುತ್ತಾರೆ.

ಒಟ್ಟಿನಲ್ಲಿ ಮಳೆಗಾಲದಲ್ಲಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ಮಾಧ್ಯಮದವರಿಗೆ ಮತ್ತು ಸಾರ್ವಜನಿಕರು ನೋಡಲು ಬಂದು ಹೋಗುವ ಪ್ರವಾಸಿ ತಾಣವಾಗಿದೆ. ನಮ್ಮ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಇದುವರೆಗೂ ಸಾಧ್ಯವಾಗದಿರುವುದು ಬೇಸರದ ಸಂಗತಿ ಎನ್ನುತ್ತಾರೆ ಓಬಲಾ ರೆಡ್ಡಿ.

ಹಾರಂಗಿ ಜಲಾಶಯದಿಂದ ಈಗ ಏಕಾಏಕಿ ನೀರು ಬಿಡುಗಡೆ ಮಾಡದಿರುವುದರಿಂದ ಅನುಕೂಲವಾಗುತ್ತಿದೆ. ಕಾವೇರಿ ನದಿ ಪಾತ್ರದಲ್ಲಿ ಮಳೆ ನೋಡಿಕೊಂಡು ಮತ್ತು ನದಿಯಲ್ಲಿ ಹರಿವಿನ ಪ್ರಮಾಣ ನೋಡಿಕೊಂಡು ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಆದ್ದರಿಂದ ಕುಶಾಲನಗರದ ತಗ್ಗು ಪ್ರದೇಶಗಳ ನಿವಾಸಿಗಳಿಗೆ ಆತಂಕ ಕೊಂಚ ಕಡಿಮೆಯಿದೆ ಎನ್ನಬಹುದು. ಕಾವೇರಿ ನೀರಾವರಿ ನಿಗಮ, ಕಂದಾಯ ಮತ್ತು ಕುಶಾಲನಗರ ಪುರಸಭೆ ಅಧಿಕಾರಿಗಳ ಸಮನ್ವಯತೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದೆ ಎನ್ನಬಹುದು.

ಈಗಿನ ಮಡಿಕೇರಿ ಕ್ಷೇತ್ರದ ನೂತನ ಶಾಸಕ ಡಾ.ಮಂತರ್ ಗೌಡ ಅವರ ಜಾಣ್ಮೆ ಮತ್ತು ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ರೀತಿ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಗೋಡೆ ಎತ್ತರಿಸಬೇಕು
ಈಗಿರುವ ಕಾಲುವೆ ಮೂಲಕ ನದಿ ನೀರು ಬಡಾವಣೆಗೆ ನುಗ್ಗಿ ಬರುತ್ತಿರುವುದರಿಂದ ಬಡಾವಣೆಯಲ್ಲಿ ಪ್ರವಾಹ ಸ್ಥಿತಿ ಉಂಟಾಗುತ್ತಿದೆ. ಕಾಲುವೆ ಎತ್ತರವನ್ನು ಹೆಚ್ಚಿಸಬೇಕು. ರಾಜ್ಯ ಹೆದ್ದಾರಿಯಿಂದಲ್ಲೇ ಕನಿಷ್ಠ 2 ಅಡಿ ಎತ್ತರ ಮಾಡಿದರೆ ಒಳ್ಳೆಯದು. ನದಿಗೆ ಕಾಲುವೆ ಮೂಲಕ ಹೋಗುವ ನೀರು ಎತ್ತರದಿಂದ ಬೀಳುವಂತಾಗಬೇಕು. ಆಗ ಕೊಂಚ ನಿಟ್ಟುಸಿರು ಬಿಡಬಹುದು.
ಶಿಲ್ಪಾ ಶ್ರೀಧರ್, ಗೃಹಿಣಿ, ಸಾಯಿ ಬಡಾವಣೆ, ಕುಶಾಲನಗರ

ದೇವರು ಯಾವಾಗ ಕೃಪೆ ತೋರುತ್ತಾನೋ?
ಸಾಯಿ ಬಡಾವಣೆಗೆ ಕಾವೇರಿ ನದಿ ನೀರು ಬರದಂತೆ ನದಿ ಪಾತ್ರದಲ್ಲಿ ತಡೆಗೋಡೆ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಾರೆ. ಮಳೆಗಾಲದಲ್ಲಿ ರಾಜಕಾರಣಿಗಳು ಬರುವುದು ಬಿಟ್ಟರೆ ಬೇರೆ ಸಂದರ್ಭದಲ್ಲಿ ಈ ಯೋಚನೆಯೇ ಇರುವುದಿಲ್ಲ. ಸಾಯಿಬಾಬಾ ಯಾವಾಗ ಕೃಪೆ ತೋರುತ್ತಾನೋ ಗೊತ್ತಿಲ್ಲ.
ಲತಾ ನಂಜುಂಡಸ್ವಾಮಿ, ಗೃಹಿಣಿ, ಸಾಯಿ ಬಡಾವಣೆ

ಶಾಸಕರು ಆಶ್ವಾಸನೆ ನೀಡಿದ್ದರು
ಸಾಯಿ ಬಡಾವಣೆ ಒಂದು ಬದಿಯಲ್ಲಿ ರಾಜಕಾಲುವೆ ಇತ್ತು ಎಂದು ಹಿರಿಯರು ತಿಳಿಸುತ್ತಾರೆ. ಆದರೆ ಆ ರಾಜಕಾಲುವೆ ಒತ್ತುವರಿಯಾಗಿದೆ. ಅದನ್ನು ತಕ್ಷಣ ತೆರವುಗೊಳಿಸಿ ಇಲ್ಲಿ ವಾಸಿಸುವ ಜನರ ಸಂಕಷ್ಟ ನಿವಾರಣೆ ಮಾಡಬೇಕಿದೆ. ಮಂತರ್ ಗೌಡ ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಶ್ವಾಸನೆ ನೀಡಿದ್ದಾರೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು.
ಓಬಲಾ ರೆಡ್ಡಿ, ನಿವಾಸಿ, ಸಾಯಿ ಬಡಾವಣೆ

ರಸ್ತೆ, ಚರಂಡಿಗಳನ್ನು ನಿರ್ಮಿಸಿ
ಕುಶಾಲನಗರ ಪುರಸಭೆ ವತಿಯಿಂದ ಆದ್ಯತೆ ಮೇಲೆ ಸಾಯಿ ಬಡಾವಣೆಯ ರಸ್ತೆ, ಚರಂಡಿಗಳನ್ನು ನಿರ್ಮಿಸುವ ಮೂಲಕ ಕಾಮಗಾರಿ ನಡೆಸಬೇಕು. ಆಗ ಮನೆಗಳಿಗೆ ನೀರು ಬರುವುದು ಕೊಂಚ ತಡೆದಂತಾಗುತ್ತದೆ. ಈ ಬಗ್ಗೆ ಶಾಸಕರು ಮತ್ತು ಅಧಿಕಾರಿ ವರ್ಗ ಗಮನ ಹರಿಸಬೇಕು.
ಚಂದ್ರಕಲಾ ಮಂಜುನಾಥ್, ಗೃಹಿಣಿ, ಸಾಯಿ ಬಡಾವಣೆ

ನೀರಿನ ಮಾರ್ಗ ಬದಲಿಸಿ
ಮೇಲ್ಭಾಗದಿಂದ ಸಾಯಿ ಬಡಾವಣೆಯ ಕಾಲುವೆ ಮೂಲಕ ಹರಿಯುವ ನೀರಿನ ಮಾರ್ಗ ಬದಲಿಸಬೇಕು. ಇರುವ ಪುಟ್ಟ ಕಾಲುವೆಗೆ ಒತ್ತಡ ಕಡಿಮೆಯಾಗುತ್ತದೆ.
ಬಿ.ಜಿ.ರವಿಕುಮಾರ್, ಸಾಯಿ ಬಡಾವಣೆ ನಿವಾಸಿ

ಶಾಶ್ವತ ಪರಿಹಾರ ದೊರೆಯಬೇಕು
ಸಾಯಿ ಬಡಾವಣೆಗೆ ಕಾವೇರಿ ನೀರು ಬರದಂತೆ ಏನು ಮಾಡಬಹುದು ಎಂದು ತಜ್ಞರ ಸಮಿತಿ ರಚಿಸಿ ಅವರ ವರದಿ ಅನುಸಾರ ಮಾಡಿದರೆ ಒಳಿತು. ಏನೇ ಮಾಡಿದರೂ ನದಿ ಪಾತ್ರದ ಜನರ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ದೊರೆಯಬೇಕು. ಸಂಬಂಧಿಸಿದವರು ಕೊಂಚ ಶೀಘ್ರ ಕಾರ್ಯೋನ್ಮೋಖ ಆಗಬೇಕು.
ಮುನಿಸ್ವಾಮಿ, ಸಾಯಿಬಾಬಾ ಮಂದಿರದ ಟ್ರಸ್ಟಿ, ಕುಶಾಲನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net