ತಟ್ಟೆಹಳ್ಳಿ ಗ್ರಾಮಸ್ಥರ ಪ್ರತಿಭಟನೆ

4blrp4
ಬೇಲೂರು ತಾಲೂಕು ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ತಟ್ಟೆಹಳ್ಳಿ ಗ್ರಾಮಸ್ಥರ ಅಹವಾಲುಗಳನ್ನು ಶಾಸಕ ಎಚ್.ಕೆ.ಸುರೇಶ್, ತಹಸೀಲ್ದಾರ್ ಎಂ.ಮಮತಾ ಆಲಿಸಿದರು.
Published on

ಬೇಲೂರು: ಗ್ರಾಮದಲ್ಲಿರುವ ಹತ್ತಾರು ಎಕರೆ ಜಮೀನನ್ನು ಒಂದು ಸಮುದಾಯದವರು ಉಳುಮೆ ಮಾಡುತ್ತಿದ್ದು, ಅದು ಎಲ್ಲರಿಗೂ ಸಮವಾಗಿ ಹಂಚಿಕೆಯಾಗಬೇಕು ಎಂದು ತಟ್ಟೆಹಳ್ಳಿ ಗ್ರಾಮಸ್ಥರು ತಾಲೂಕು ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.


ತಟ್ಟೆಹಳ್ಳಿ ಗ್ರಾಮದ ಲತಾ ಮಾತನಾಡಿ, ಗ್ರಾಮದಲ್ಲಿರುವ ಗೋಮಾಳದ 65 ಎಕರೆ ಜಮೀನನ್ನು ಗ್ರಾಮದ ಒಂದು ಸಮುದಾಯದ 30ಕ್ಕೂ ಹೆಚ್ಚು ಕುಟುಂಬದವರು ಉಳುಮೆ ಮಾಡುತ್ತಿದ್ದಾರೆ. ಆದರೆ ನಾವು ಕೇಳಲು ಹೋದರೆ ದೌರ್ಜನ್ಯಕ್ಕೆ ಮುಂದಾಗುತ್ತಾರೆ. ಗ್ರಾಮದಲ್ಲಿ ಐದಾರು ಸಮುದಾಯದವರಿದ್ದು, ಮನೆ ಕಟ್ಟಿಕೊಳ್ಳಲು 7 ಎಕರೆ ಜಮೀನು ಮೀಸಲಿಡುವಂತೆ ಹೇಳಲಾಗಿತ್ತು. ಜತೆಗೆ ಎಲ್ಲ ಜಮೀನನ್ನು ಸಮನಾಗಿ ಹಂಚಿಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಗ್ರಾಮದ ಒಂದು ಸಮುದಾಯದವರು ಯಾರಿಗೂ ತಿಳಿಸದೆ ಅವರೆ ಪೂರ್ತಿ ಜಮೀನು ಉಳುಮೆ ಮಾಡಿದ್ದಾರೆ. ಈ ಜಮೀನನ್ನು ಎಲ್ಲರಿಗೂ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.


ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಗ್ರಾಮದ ಜಮೀನು ನಿಮಗೆ ಉಳಿಬೇಕು. ಈಗ ಉಳುಮೆ ಮಾಡುತ್ತಿರುವ ಜಾಗದಲ್ಲಿ ಯಾರೂ ಉಳುಮೆ ಮಾಡದಂತೆ ತಹಸೀಲ್ದಾರರು ಕ್ರಮ ಕೈಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗ್ರಾಮಸ್ಥರೆಲ್ಲ ಸೇರಿ ಯಾವುದೇ ಜಾತಿ, ಧರ್ಮ ಎನ್ನದೆ ಸಮಾನವಾಗಿ ತೀರ್ಮಾನ ಮಾಡಲಾಗುವುದು. ಯಾರೂ ಭಯ ಪಡುವ ಅಗತ್ಯವಿಲ್ಲ. ನಿಮ್ಮ ಗ್ರಾಮದ ಆಸ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.


ಪ್ರತಿಭಟನೆಯಲ್ಲಿ ಭಾಗ್ಯಮ್ಮ, ಗೌರಮ್ಮ, ರಂಜಿತಾ, ಚಂದ್ರಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net