

ಕೋಲಾರ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ನಗರದ ಕಾಂಗ್ರೆಸ್ ಭವನದ ಮುಂಭಾಗದ ರಸ್ತೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ ನೇತೃತ್ವದಲ್ಲಿ ಮಹಿಳೆಯರು ಸಿಲಿಂಡರ್ ಜತೆಗೆ ಲಟ್ಟಣಿಗೆಯಲ್ಲಿ ತಟ್ಟೆ ಬಡಿಯುವ ಮೂಲಕ ಬೆಲೆ ಏರಿಕೆಯ ಕ್ರಮವನ್ನು ಅಣಕಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾ ಕಾಂಗ್ರೆಸ್ ಕಿಸಾನ್ ಖೇತ್ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮಾತನಾಡಿ, ತೈಲ ಬೆಲೆ ಹೆಚ್ಚಳದಿಂದ ಎಲ್ಲ ವರ್ಗಕ್ಕೂ ತೊಂದರೆಯಾಗಿದೆ. ಅಡುಗೆ ಅನಿಲದ ದರ 900 ರೂಗೆ ಏರಿಕೆಯಾಗಿದೆ. ಪೆಟ್ರೋಲ್ ಲೀಟರ್‌ಗೆ 105 ರೂ ದಾಟಿದೆ, ವಿದ್ಯುತ್ ದರ ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವುದು ಜನರ ಕಣ್ಣೀರಿಗೆ ಕಾರಣವಾಗಿದೆ. ಕೃಷಿ, ಕಾರ್ಮಿಕ ವಿರೋಧಿ ಕಾಯ್ದೆಗಳಿಂದ ಶೇ.70 ಭಾಗದ ರೈತಾಪಿ ಹಾಗೂ ಕಾರ್ಮಿಕರಿಗೆ ತೊಂದರೆ ಆಗುತ್ತಿದೆ, ಬಿಜೆಪಿ ಸರ್ಕಾರ ತೊಲಗದಿದ್ದರೆ ಬಡ ಜನ, ದೀನ ದಲಿತರು ಕಷ್ಟದಿಂದ ಪಾರಾಗಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಕರೊನಾ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಆಕ್ಸಿಜನ್ ಇಲ್ಲದೆ ಸೋಂಕಿತರು ಪ್ರಾಣ ಕಳೆದುಕೊಂಡರು. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಆಂಬುಲೆನ್ಸ್, ಔಷಧ, ದಿನಸಿ ಕಿಟ್ ಇನ್ನಿತರ ರೀತಿಯಲ್ಲಿ ನೆರವು ನೀಡುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಿದೆ. ಆದರೆ ಬಿಜೆಪಿ ಸರ್ಕಾರ ಫುಡ್‌ಕಿಟ್‌ನಲ್ಲೂ ಅವ್ಯವಹಾರ ಎಸಗಿದೆ ಎಂದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಪತೆಪ್ಪ, ಮುಖಂಡರಾದ ತ್ಯಾಗರಾಜ್, ಲಾಲ್ ಬಹುದ್ದೂರ್ ಶಾಸ್ರಿ, ಕಾರ್ಮಿಕ ವಿಭಾಗದ ಅಧ್ಯಕ್ಷ ಎಚ್.ಎಂ. ಯಲ್ಲಪ್ಪಯಲ್ಲಪ್ಪ, ಕಿಸಾನ್ ಖೇತ್ ಮುಖಂಡ ನಾಗರಾಜ್, ರಾಜೇಶ್, ನರಸಿಂಹರಾಜು, ಮಹಿಳಾ ಘಟಕದ ಪ್ರಮುಖರಾದ ಸುಜಾತಾ, ರೂಪಾ, ಆಯುಷಾ ಇತರರು ಪಾಲ್ಗೊಂಡಿದ್ದರು.