ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಹಾನಿ

1-hvr-09
Published on

ಹಾನಗಲ್ಲ: ತಾಲೂಕಿನಾದ್ಯಂತ ಸೋಮವಾರ ಸುರಿದ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪಟ್ಟಣದ ಹೊಸಬಸ್ ನಿಲ್ದಾಣ ಪ್ರದೇಶದಲ್ಲಿ ಮಳೆ ನೀರು ಚರಂಡಿ ತುಂಬಿ ರಸ್ತೆಯುದ್ದಕ್ಕೂ ಹರಿದು ವಾಹನ ಮತ್ತು ಜನರ ಸಂಚಾರಕ್ಕೆ 2 ಗಂಟೆಗಳ ಕಾಲ ತಡೆಯೊಡ್ಡಿತು. ತಡಸ-ಗೊಂದಿ ರಸ್ತೆಯ ಕಲ್ಲಭಾವಿ ರಸ್ತೆಯಲ್ಲಿ ಮಳೆ ನೀರು ಕೆಲವು ತಗ್ಗಿನಲ್ಲಿರುವ ಅಂಗಡಿಗಳಿಗೂ ನುಗ್ಗಿ ಸಮಸ್ಯೆ ಸೃಷ್ಟಿಸಿತ್ತು. ಬೈಕ್​ಗಳು ಜಲಾವೃತಗೊಂಡಿದ್ದವು. ಚರಂಡಿಯಲ್ಲಿ ತುಂಬಿಕೊಂಡಿದ್ದ ಪ್ಲಾಸ್ಟಿಕ್ ಹಾಗೂ ಬಾಟಲ್​ಗಳೆಲ್ಲವೂ ಮಳೆ ನೀರಿನೊಂದಿಗೆ ರಸ್ತೆಗೆ ತೇಲಿ ಬಂದವು.

ಹಾವಣಗಿ ಗ್ರಾಮದಲ್ಲಿ ಮಳೆಯ ನೀರು 8-10 ಮನೆಗಳಿಗೆ ನುಗ್ಗಿ ಹಾನಿಯುಂಟು ಮಾಡಿದೆ. ಹಾವಣಗಿಯಿಂದ ಬ್ಯಾಡಗಿಗೆ ತೆರಳುವ ಮಾರ್ಗದಲ್ಲಿ ಫಕ್ಕೀರಪ್ಪ ಆಲೂರ ಅವರ ಮನೆಯಿಂದ ಬ್ಯಾಡಗಿಗೆ ತೆರಳುವ ರಸ್ತೆಯಲ್ಲಿ ಸಿಡಿ ನಿರ್ವಿುಸದಿರುವುದರಿಂದ ನೀರು ಮನೆಗಳಿಗೆ ನುಗ್ಗಿದೆ. 2 ವರ್ಷಗಳಿಂದಲೂ ಈ ಸಮಸ್ಯೆ ತಲೆದೋರುತ್ತಿದ್ದರೂ, ಜಿಪಂ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರೂ ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹಾವೇರಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ಸುರಿದ ಮಳೆ ಇಳೆಗೆ ತಂಪು ತಂದಿತು. ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನ ಗಂಟೆಗೂ ಹೆಚ್ಚುಕಾಲ ಮಳೆಯಾಯಿತು. ಗಾಳಿಯ ಆರ್ಭಟ ಇಲ್ಲದೆ ಸುರಿದ ಮಳೆಗೆ ಕೆಲವೆಡೆ ಜಮೀನುಗಳಲ್ಲಿ ನೀರು ಶೇಖರಣೆಗೊಂಡಿತು. ನಗರ ಪ್ರದೇಶದಲ್ಲಿ ಮಧ್ಯಾಹ್ನವೇ ಮಳೆ ಆರಂಭಗೊಂಡಿದ್ದರಿಂದ ಪಾದಚಾರಿಗಳು ಪರದಾಡಬೇಕಾಯಿತು. ಇಡೀ ದಿನ ಮೋಡ ಮುಸುಕಿದ ವಾತಾವರಣವಿದ್ದು, ತುಂತುರು ಮಳೆ ಸಾಮಾನ್ಯವಾಗಿತ್ತು. ಹಾವೇರಿ ತಾಲೂಕಿನಲ್ಲಿ 15.2 ಮಿಮೀ, ಹಾನಗಲ್ಲ ತಾಲೂಕಿನಲ್ಲಿ 11 ಮಿಮೀ, ಹಿರೇಕೆರೂರ ತಾಲೂಕಿನಲ್ಲಿ 19.2 ಮಿಮೀ, ಬ್ಯಾಡಗಿ ತಾಲೂಕಿನಲ್ಲಿ 3.6 ಮಿಮೀ, ಶಿಗ್ಗಾಂವಿ ತಾಲೂಕಿನಲ್ಲಿ 12.4 ಮಿಮೀ ಹಾಗೂ ಸವಣೂರ ತಾಲೂಕಿನಲ್ಲಿ 45.5 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net