

ರಾಯಚೂರು: ಇತ್ತಿಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಭತ್ತ ಹಾಗೂ ತೊಗರಿ ಖರೀದಿ ಕೇಂದ್ರ ಸ್ಥಾಪಿಸುವ ಕುರಿತು ಸಚಿವರಾಗಲಿ, ಶಾಸಕರಾಗಲಿ ಮಾತನಾಡಿಲ್ಲ. ಈ ಬಗ್ಗೆ ಚರ್ಚೆಗಳಾಗಿಲ್ಲ. ಸರ್ಕಾರ ಜಿಲ್ಲೆಯಲ್ಲಿ ಭತ್ತ ಮತ್ತು ತೊಗರಿ ಖರೀದಿ ಕೇಂದ್ರ ಸ್ಥಾಪಿಸಲು ನಿರ್ಲಕ್ಷೃ ವಹಿಸುತ್ತಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರಿನಲ್ಲಿ ರೈತರು ಬೆಳೆದ ಉತ್ಪನ್ನಗಳು ಖಾಲಿಯಾದ ನಂತರ ಸರ್ಕಾರದಿಂದ ಖರೀದಿ ಮಾಡುವ ಪರಂಪರೆ ಬೆಳೆದುಬಿಟ್ಟಿದೆ. ಸರ್ಕಾರ ಫಸಲು ಬಂದ ತಕ್ಷಣ ಖರೀದಿ ಕೇಂದ್ರ ಆರಂಭಿಸಿದ್ದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಖಾಸಗಿ ವರ್ತಕರಿಗೆ ಸರ್ಕಾರದ ಖರೀದಿ ಕೇಂದ್ರದಿಂದ ಅನಾನುಕೂಲವಾಗುತ್ತದೆ ಎಂದು ಅಧಿಕಾರಿಗಳು, ವರ್ತಕರು ಶಾಮೀಲಾಗಿ ಖರೀದಿ ಕೇಂದ್ರ ಸ್ಥಾಪನೆ ಮಾಡಲು ವಿಳಂಬ ಮಾಡುತ್ತಿದ್ದಾರೆ. ಇದರಿಂದ ಸರ್ಕಾರದ ಯೋಜನೆಗಳು ರೈತರಿಗೆ ಮುಟ್ಟುತ್ತಿಲ್ಲ ಎಂದರು.
ಭತ್ತ ಹಾಗೂ ತೊಗರಿ ಕೇಂದ್ರ ಸ್ಥಾಪನೆ ಮಾಡುವಂತೆ ನ.16ಕ್ಕೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಹಸೀಲ್ ಕಚೇರಿ ಮುತ್ತಿಗೆ ಹಾಕಲಾಗುತ್ತದೆ. ಒಂದು ವೇಳೆ ಖರೀದಿ ಕೇಂದ್ರ ಸ್ಥಾಪನೆ ಮಾಡುವಲ್ಲಿ ವಿಳಂಬಧೋರಣೆ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಉಸ್ತುವಾರಿ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಕಚೇರಿಗಳಿಗೂ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಅಶೋಕ ನಿಲೋಗಲ್, ಚಿಟ್ಟಿಬಾಬು, ವೀರೇಶ ನಾಯಕ ಸೇರಿದಂತೆ ಇತರರಿದ್ದರು.