

ಯಾದಗಿರಿ: ಜಿಲ್ಲೆಯನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ಈ ಕುರಿತು ಬುಧವಾರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಿದ ರೈತ ಸಂಘದ ಜಿಲ್ಲಾದ್ಯಕ್ಷ ರಂಗನಾಥಗೌಡ ಬೈರಿಮರಡಿ ಮಾತನಾಡಿ, ರಾಜ್ಯಾದ್ಯಂತ ವಾಡಿಕೆಯ ಮಳೆಯಾಗದೇ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಮುಂಗಾರು ಕೈಕೊಟ್ಟಿದ್ದು, ಮಳೆ ಇಲ್ಲದ ಕಾರಣ ಜಲಾಷಯ ಬತ್ತಿವೆ, ನೀರು ಇಲ್ಲದೇ ಬೆಳೆಗಳು ಒಣಗುತ್ತಿವೆ ಒಟ್ಟಾರೆ ಅನ್ನದಾತ ರೈತರು ಸಂಕಷ್ಟಕ್ಕೆ ಈಡಾಗಿದ್ದು ಕೂಡಲೇ ಬರಗಾಲ ಘೋಷಣೆ ಮಾಡಬೇಕು ಮತ್ತು ಬರ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕೆಂದು ಆಗ್ರಹಿಸಿದರು.
ಕೂಡಲೇ ಕ್ರಮ ಕೈಗೊಂಡು ಪರಿಹಾರ ಕಾರ್ಯಗಳನ್ನು ಆರಂಭಿಸಬೇಕು, ಬರ ಪರಿಹಾರದ ಮೊತ್ತವನ್ನು ಡಿಬಿಟಿ ಮುಖಾಂತರ ರೈತರ ಖಾತೆಗಳಿಗೆ ಜಮಾ ಮಾಡಬೇಕು. ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಬಸವ ಸಾಗರ ಜಲಾಷಯದಲ್ಲಿ ನೀರು ಇದ್ದರೂ ಸಹ ವಾರಾಬಂದಿ ಜಾರಿಗೊಳಿಸಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಎಂದು ಅವರು ಆರೋಪಿಸಿದರು.