

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಕ್ಯಾನ್ಸರ್‌ಕಾರಕ ತಂಬಾಕು ವ್ಯಸನದಿಂದ ಜನರನ್ನು ದೂರವಿಡಲು ಅವಿರತ ಶ್ರಮಿಸುತ್ತಿರುವ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಪ್ರಾಯೋಗಿಕವಾಗಿ ಪಂಚಾಯಿತಿಯೊಂದನ್ನು ಆಯ್ಕೆ ಮಾಡಿಕೊಂಡಿದ್ದು, ತಂಬಾಕುಮುಕ್ತ ಪಂಚಾಯಿತಿ ನಿರ್ಮಾಣದ ಗುರಿಯೊಂದಿಗೆ ಹೊಸ ಹೆಜ್ಜೆ ಇಟ್ಟಿದೆ.
ಆರಂಭದಲ್ಲಿ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಿದ್ದ ತಂಬಾಕು (ಬೀಡಿ, ಸಿಗರೇಟ್ ಗುಟ್ಕಾ)ವ್ಯಸನ ಗ್ರಾಮಗಳಲ್ಲೂ ದಾಂಗುಡಿ ಇಟ್ಟಿದೆ. ಈ ಹಿಂದೆ ತಂಬಾಕು ಉತ್ಪನ್ನ ಖರೀದಿಸಲು ದೂರದ ಪಟ್ಟಣ ಪ್ರದೇಶಗಳಿಗೆ ಬರಬೇಕಿತ್ತು. ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿ ಹಳ್ಳಿಗಳಲ್ಲೂ ನಾಯಿಕೊಡೆಗಳಂತೆ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ 105 ಪಂಚಾಯಿತಿಯನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ನೆಲಮಂಗಲ ತಾಲೂಕು ನರಸೀಪುರ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡಿದ್ದು, ಈ ಪಂಚಾಯಿತಿ ವ್ಯಾಪ್ತಿಯ 18 ಹಳ್ಳಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಸಂಪೂರ್ಣ ತಡೆಹಾಕುವ ಜತೆಗೆ ಇಷ್ಟೂ ಹಳ್ಳಿಗಳ ವ್ಯಸನಿಗಳನ್ನು ತಂಬಾಕು ದುಶ್ಚಟದಿಂದ ದೂರವಿಡುವ ಪ್ರಯತ್ನಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಜಿಲ್ಲಾಧಿಕಾರಿ ಸಭೆ: ಈ ಹಿಂದಿನ ವಿಶ್ವ ತಂಬಾಕು ರಹಿತ ದಿನದ ಕಾರ್ಯಕ್ರಮದ ಬಳಿಕ ತಂಬಾಕುಮುಕ್ತ ಜಿಲ್ಲೆ ನಿರ್ಮಾಣದ ಬಗ್ಗೆ ಇಂಗಿತ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಯೋಜನೆಯ ಪ್ರಯೋಗಕ್ಕೆ ಸೂಚನೆ ನೀಡಿದ್ದರು. ಈ ಸಭೆಯಲ್ಲಿ ನರಸೀಪುರ ಪಂಚಾಯಿತಿಯನ್ನು ಪ್ರಾಥಮಿಕ ಹಂತದಲ್ಲಿ ಆಯ್ಕೆ ಮಾಡಲಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಈ ಪ್ರಯೋಗಕ್ಕೆ ರೂಪುರೇಷೆ ಸಿದ್ಧಪಡಿಸುತ್ತಿದೆ.
ಮನವೊಲಿಸುವ ಮಂತ್ರ: ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿ ಮಾಲೀಕರ ಮನವೊಲಿಕೆ ಸುಲಭದ ಮಾತಲ್ಲ, ದಂಡ ಪ್ರಯೋಗಕ್ಕಷ್ಟೇ ಎಲ್ಲವೂ ಬಗೆಹರಿಯುವುದಿಲ್ಲ ಎಂಬುದನ್ನು ಮನಗಂಡಿರುವ ಸಿಬ್ಬಂದಿ ಪಂಚಾಯಿತಿಯ ಅಧ್ಯಕ್ಷ, ಸದಸ್ಯರಾದಿಯಾಗಿ ಸ್ಥಳೀಯ ವೈದ್ಯರು, ಪಿಡಿಒ, ಆಶಾ ಕಾರ್ಯಕರ್ತೆಯರು, ಸೀಶಕ್ತ ಸಂಘಟನೆಗಳು ಸೇರಿ ಯುವ ಸಮುದಾಯದವರೊಟ್ಟಿಗೆ ಸೇರಿ ಕಾರ್ಯತಂತ್ರ ರೂಪಿಸಲು ಚಿಂತನೆ ನಡೆಸಿದೆ. ಮೊದಲಿಗೆ ಹಳ್ಳಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ ಮಾಲೀಕರ ಮನವೊಲಿಸಿ ಉತ್ಪನ್ನ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮಾಡುವುದು, ಹಳ್ಳಿಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುವುದು, ತೀವ್ರತರನಾದ ವ್ಯಸನಿಗಳನ್ನು ವ್ಯಸನ ಬಿಡಿಸುವ ಕೇಂದ್ರಗಳಿಗೆ ದಾಖಲಿಸುವುದು ಮತ್ತಿತರ ಅಂಶಗಳೊಂದಿಗೆ ಯೋಜನೆ ಜಾರಿಗೊಳಿಸಲು ರೂಪುರೇಷೆ ಸಿದ್ಧ ಮಾಡಿಕೊಂಡಿದೆ.
ಮೊದಲು ಪಟ್ಟಣದಲ್ಲಿ ಬ್ರೇಕ್: ನೆಲಮಂಗಲ ತಾಲೂಕಿನಲ್ಲಿ ದೊಡ್ಡ ಪಂಚಾಯಿತಿ ಎನಿಸಿರುವ ನರಸೀಪುರ ಪಟ್ಟಣದಲ್ಲೇ 50ಕ್ಕೂ ಹೆಚ್ಚು ತಂಬಾಕು ಉತ್ಪನ್ನ ಮಾರಾಟದ ಅಂಗಡಿಗಳಿವೆ, 2201 ಕುಟುಂಬ, 8290 ಜನಸಂಖ್ಯೆ ಹೊಂದಿದ್ದು, ಮೊದಲ ಹಂತದಲ್ಲಿ ಪಟ್ಟಣ ಪ್ರದೇಶವನ್ನು ತಂಬಾಕು ಮುಕ್ತಗೊಳಿಸುವ ಇರಾದೆ ಹೊಂದಲಾಗಿದೆ. ಸಣ್ಣಪುಟ್ಟ ಹಳ್ಳಿಗಳನ್ನೊಳಗೊಂಡಿರುವ ಪಂಚಾಯಿತಿಯಾಗಿದ್ದು, ಬಳಿಕ ಗ್ರಾಮಗಳ ಮಟ್ಟದಲ್ಲಿ ಕಡಿವಾಣ ಹಾಕುವ ಚಿಂತನೆ ಅಧಿಕಾರಿಗಳದ್ದಾಗಿದೆ.
ತಂಬಾಕುಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಪ್ರಾಯೋಗಿಕ ಹಂತದಲ್ಲಿ ಪಂಚಾಯಿತಿಯೊಂದನ್ನು ಆಯ್ಕೆ ಮಾಡಿ ಯೋಜನೆ ಲಪ್ರದಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಎಲ್ಲ ಸಿದ್ಧತೆಗಳು ನಡೆದಿವೆ, ಹಂತಹಂತವಾಗಿ ಎಲ್ಲ ಪಂಚಾಯಿತಿಗಳನ್ನು ತಂಬಾಕುಮುಕ್ತಗೊಳಿಸುವ ಉದ್ದೇಶ ಹೊಂದಲಾಗಿದೆ. ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ನೆಲಮಂಗಲ ತಾಲೂಕಿನ ನರಸೀಪುರ ಪಂಚಾಯಿತಿಯನ್ನು ತಂಬಾಕುಮುಕ್ತಗೊಳಿಸುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಈ ಬಗ್ಗೆ ಸರಣಿ ಸಭೆಗಳನ್ನು ನಡೆಸಿದ್ದು ಹಂತಹಂತವಾಗಿ ಕಾರ್ಯೋನ್ಮುಖವಾಗುವುದರೊಂದಿಗೆ ತಂಬಾಕುಮುಕ್ತ ಪಂಚಾಯಿತಿ ನಿರ್ಮಾಣದ ಗುರಿಮುಟ್ಟುವ ಪ್ರಯತ್ನ ಆರಂಭವಾಗಿದೆ. ಶಾಂತಲಾ, ತಂಬಾಕು ನಿಯಂತ್ರಣಕೋಶ ಯೋಜನಾ ವ್ಯವಸ್ಥಾಪಕರು, ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ನಿಯಮ ಉಲ್ಲಂಸಿ ತಂಬಾಕು ಮಾರಾಟ ಹಾಗೂ ಸೇವನೆ ವಿರುದ್ಧ ಪ್ರತಿನಿತ್ಯ ಕಾರ‌್ಯಾಚರಣೆ ನಡೆಯುತ್ತಿರುತ್ತದೆ, ಬೀದಿನಾಟಕ, ಕರಪತ್ರ ಹಂಚಿಕೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಜತೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ತಂಬಾಕು ಸೇವನೆ ಹಾಗೂ ಮಾರಾಟ ನಿಯಂತ್ರಣಕ್ಕೆ ಈ ವಿನೂತನ ಯೋಜನೆ ಸಹಕಾರಿಯಾಗಲಿದೆ. ವಿದ್ಯಾರಾಣಿ, ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ್ತಿ ತಂಬಾಕುಮುಕ್ತ ಪಂಚಾಯಿತಿ ನಿರ್ಮಾಣಕ್ಕೆ ನರಸೀಪುರ ಪಂಚಾಯಿತಿ ಹೆಸರು ಸೂಚಿಸಲಾಗಿದ್ದು, ಜಿಲ್ಲಾಡಳಿತದ ಆದೇಶದಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ತಂಬಾಕು ನಿಯಂತ್ರಣಕೋಶ, ಆರೋಗ್ಯಾಧಿಕಾರಿಗಳು, ತಹಸೀಲ್ದಾರ್ ಸೇರಿ ಸಂಬಂಧಪಟ್ಟ ಎಲ್ಲರ ಸಹಕಾರದೊಂದಿಗೆ ಯೋಜನೆ ಅನುಷ್ಠಾನಕ್ಕೆ ಶ್ರಮಿಸಲಾಗುತ್ತಿದೆ. ಜಿ.ಮಂಜುನಾಥ್, ಕಾರ್ಯದರ್ಶಿ, ನರಸೀಪುರ ಪಂಚಾಯಿತಿ