

ಹಾಸನ: ಯುವ ಜನತೆಯನ್ನು ತಂಬಾಕಿನಿಂದ ದೂರವಿರಿಸಿ ತಂಬಾಕು ಮುಕ್ತ ಸಮಾಜ ರೂಪಿಸಲು ನಾವೆಲ್ಲರೂ ಒಗ್ಗೂಡಿ ಹೋರಾಡುವುದು ಅವಶ್ಯಕ ಎಂದು ಡಿಎಚ್‌ಒ ಜಿಲ್ಲಾ ಸಲಹೆಗಾರರಾದ ಮಮತಾ ಹೇಳಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ (ಗಂಧದ ಕೋಠಿ) ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ತಂಬಾಕು ಮುಕ್ತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪುರುಷರು ಮಾತ್ರವಲದೆ ಮಹಿಳೆಯರು ಸಹ ತಂಬಾಕು ಸೇವನೆಗೆ ಒಳಗಾಗಿದ್ದಾರೆ. ತಂಬಾಕು ಸೇವನೆ ಮಾಡುವುದರ ಜತೆಗೆ ಧೂಮಪಾನದಿಂದ ಹೊಗೆ ಇತರೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಂಬಾಕು ವಾಣಿಜ್ಯ ಬೆಳೆವಾಗಿರುವುದರಿಂದ ಹಲವಾರು ರೈತರು ಈ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ತಂಬಾಕು ಉತ್ಪಾದನೆ ಹಾಗೂ ಸೇವನೆಗೆ ಸಂಪೂರ್ಣ ನಿಷೇಧ ಹೇರಬಹುದು. ಇದಕ್ಕೆ ಯುವಜನತೆಯ ಸಹಕಾರ ಬೇಕಾಗಿದೆ. ತಂಬಾಕು ಎಂಬುವುದು ನಿಕೋಟಿನ್ ಎಂಬ ವ್ಯಸನಕಾರಿ ರಾಸಾಯನಿಕವುಳ್ಳ ಒಂದು ಗಿಡ. ಇದು ಮಾರಕ ರಾಸಾಯನಿಕಗಳನ್ನು ಒಳಗೊಂಡಿದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯಾಘಾತ, ಪ್ಯಾರಾಲಿಸಿಸ್, ಶ್ವಾಸಕೋಶ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಲಿದೆ. ತಂಬಾಕು ದೇಹದ ಎಲ್ಲ ಅಂಗಾಂಗಳ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾ ಡಿ.ಕೆ.ಮಂಜಯ್ಯ ಮಾತನಾಡಿ, ಎನ್‌ಎಸ್‌ಎಸ್ ಎಂದರೆ ಶಿಸ್ತು. ವಿದ್ಯಾರ್ಥಿಗಳು ಸದೃಢ ಹಾಗೂ ಆದರ್ಶಯುತ ಶಿಸ್ತು ಪರಿಪಾಲನೆಯನ್ನು ಇಲ್ಲಿ ಕಲಿಸುತ್ತಾರೆ. ತಂಬಾಕು ಮುಕ್ತ ಜಾಗೃತಿಯನ್ನು ಪ್ರತಿಯೊಬ್ಬರೂ ಮಾಡುವುದು ಅತ್ಯಗತ್ಯ. ಮಾದಕ ವ್ಯಸನಗಳ ಸೇವನೆಯ ನಿಮಿತ್ತ, ಕ್ಷಣಿಕ ಸುಖಕ್ಕಾಗಿ ಮುಂದಿನ ಸುಂದರ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ. ತಮ್ಮ ತಮ್ಮ ಮನೆಗಳಿಂದಲೇ ತಂಬಾಕಿನಿಂದಾಗುವ ಸಮಸ್ಯೆಗಳನ್ನು ತಿಳಿಸಿ, ತಂಬಾಕು ಮುಕ್ತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ನಾವು- ನೀವು ಕೈ ಜೋಡಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಅಧಿಕಾರಿ ಎಸ್.ಜಿ.ರೇಖಾ, ಸಮಾಜಸೇವಕ ಚೇತನ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.