ತಂಬಾಕು ಮುಕ್ತ ಜಿಲ್ಲೆಯಾಗಿಸಲು ಸಹಕಾರ ಅಗತ್ಯ

19-gdg-3
Published on

ಗದಗ: ಜಿಲ್ಲೆಯನ್ನು ತಂಬಾಕು ಮುಕ್ತವಾಗಿಸಲು ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಹಸೀಲ್ದಾರರ ನೇತೃತ್ವದ ತಾಲೂಕು ಮಟ್ಟದ ತನಿಖಾದಳದ ಮೂಲಕ ಹೆಚ್ಚಿನ ಕಾರ್ಯಾಚರಣೆ ನಡೆಸಿ ಕೋಟ್ಪಾ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.

ನಗರಸಭೆಯವರು ಪರವಾನಗಿ ನೀಡುವಾಗ ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ಧೂಮಪಾನ ನಿಷೇಧದ ನಾಮಫಲಕವನ್ನು ಅಳವಡಿಸಲು ಕಟ್ಟುನಿಟ್ಟಾಗಿ ಸೂಚಿಸಬೇಕು ಎಂದರು.

ಅಬಕಾರಿ ಹಾಗೂ ಕೆಎಸ್​ಆರ್​ಟಿಸಿ ಇಲಾಖೆ ತಮ್ಮ ಅಧೀನದ ಕಾರ್ಯಕ್ಷೇತ್ರದಲ್ಲಿ ತಂಬಾಕು ನಿಷೇಧದ ಕುರಿತು ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಯವರು ಆರೋಗ್ಯ ಇಲಾಖೆಯವರೊಂದಿಗೆ ತಂಬಾಕು ನಿಯಂತ್ರಣ ದಾಳಿ ಮಾಡುವಾಗ ಸಹಕರಿಸಬೇಕು. ತಂಬಾಕು ನಿಷೇಧದ ಕುರಿತು ಜಾಗೃತಿ ಹಾಗೂ ಅನುಷ್ಠಾನ ಕಾರ್ಯಕ್ರಮಗಳು ಯಶಸ್ವಿಯಾಗಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ ಮಾತನಾಡಿ, ಜಿಲ್ಲೆಯ 47 ಕಡೆ ದಾಳಿ ನಡೆಸಿ 84,600 ರೂ. ದಂಡ ವಿಧಿಸಲಾಗಿದೆ ಎಂದರು.

ಕೆಎಸ್​ಆರ್​ಟಿಸಿ ಡಿಪೋದಲ್ಲಿ ತಂಬಾಕು ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ತಂಬಾಕು ನಿಷೇಧದ ಕುರಿತು ತರಬೇತಿ ಕಾರ್ಯಕ್ರಮ ನಡೆಸಲಾಗಿದೆ. ಪ್ರಸ್ತುತ ವರ್ಷದಲ್ಲಿ 100 ಶಾಲಾ ಕಾಲೇಜುಗಳಿಗೆ ಹಳದಿ ಲೈನ್ ಹಾಗೂ ವಾಲ್ ಪೇಂಟಿಂಗ್ ಬರೆಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಬಿ. ಕಲ್ಲೇಶ, ಡಾ.ಬಿ.ಎಂ. ಗೊಜನೂರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ರಾಜೇಂದ್ರ ಬಸರೀಗಿಡದ, ಜಿಲ್ಲಾ ಕಾರ್ವಿುಕ ಅಧಿಕಾರಿ ಸುಧಾ ಗರಗ, ಕಿರಣ ಕಾಂಬ್ಳೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net