ತಂಬಾಕು ಮುಕ್ತ ಗ್ರಾಮಗಳನ್ನಾಗಿಸಲು ಕರೆ

IMG-20241218-WA0028
Published on

ಚಾಮರಾಜನಗರ: ಗ್ರಾಮಗಳಲ್ಲಿ ತಂಬಾಕು ನಿಯಂತ್ರಣ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ಮೂಲಕ ತಂಬಾಕು ಮುಕ್ತ ಮಾದರಿ ಗ್ರಾಮವನ್ನಾಗಿಸಲು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ ಅವರು ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಕಚೇರಿ ಸಬಾಂಗಣದಲ್ಲಿಂದು ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಕೋಟ್ಟಾ-2003ರ ಅನುಷ್ಠಾನ ಮತ್ತು ತಂಬಾಕು ಮುಕ್ತ ಗ್ರಾಮದ ಪರಿಕಲ್ಪನೆಯ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಹಮಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು, ಈ ಮೂಲಕ ಸ್ಥಳೀಯ ಮಟ್ಟದ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ತಂಬಾಕು ದುಷ್ಪರಿಣಾಮಗಳು ಮತ್ತು ಕೋಟ್ಟಾ-2003ರ ಕಾನೂನು ನಿಯಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ತಂಬಾಕಿನಿಂದ ಹಲವು ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ 30 ರಿಂದ 40 ರ ವಯಸ್ಸಿನವರ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದರು.

ಯುವ ಜನತೆಗೆ ತಂಬಾಕು ದುಷ್ಪರಿಣಾಮದ ಕುರಿತು ಹೆಚ್ಚಿನ ಅರಿವು ಅವಶ್ಯಕವಿದ್ದು ಸ್ಥಳೀಯವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಾಲಾ, ಕಾಲೇಜುಗಳನ್ನು ತಂಬಾಕು ಮುಕ್ತವನ್ನಾಗಿಸಬೇಕು. ತಂಬಾಕು ತ್ಯಜಿಸಲು ಇಚ್ಛಿಸುವ ವ್ಯಸನಿಗಳಿಗೆ ಆರೋಗ್ಯ ಇಲಾಖೆ ಸಹಕಾರ ಪಡೆಯಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಂಬಾಕು ನಿಯಂತ್ರಣ ಚಟುವಟಿಕೆಗೆ ಸಂಬಂಧ ಮಹತ್ತರ ಹೆಜ್ಜೆಯನ್ನಿಡುವ ಮೂಲಕ "ತಂಬಾಕು ಮುಕ್ತ ಮಾದರಿ ಗ್ರಾಮ"ದ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಕಾರ್ಯಕ್ರಮಾಧಿಕಾರಿಗಳಾದ ಡಾ. ಸುಂದರೇಶ್ ಅವರು ತಂಬಾಕು ನಿಯಂತ್ರಣ ಕಾರ್ಯಕ್ರಮದ ಧ್ಯೇಯೋದ್ದೇಶ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೊಳ್ಳಬೇಕಿರುವ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು.

ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಭೋದನಾ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ವೈದ್ಯರಾದ ಡಾ. ದಮಯಂತಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net