ತಂಬಾಕು ಬೆಳೆಗಾರರಿಗೆ ಉಚಿತ ಟ್ರೇ ವಿತರಣೆ

HUN-NOV-3-1(CTRI PROGRAMME)
ಹುಣಸೂರು ನಗರದ ಸಿಟಿಆರ್‌ಐ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿಯ ತಂಬಾಕು ರೈತರಿಗೆ ಟ್ರೇಗಳನ್ನು ವಿತರಿಸಲಾಯಿತು. ಡಾ.ಎಸ್.ರಾಮಕೃಷ್ಣನ್, ಲಕ್ಷ್ಮಣ್‌ರಾವ್, ಶ್ರೀನಿವಾಸರೆಡ್ಡಿ ಇದ್ದರು.
Published on

ಹುಣಸೂರು: ನಗರದ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ(ಸಿಟಿಆರ್‌ಐ)ದ ವತಿಯಿಂದ ಎಸ್‌ಸಿಪಿ ಯೋಜನೆಯಡಿ ಪರಿಶಿಷ್ಟ ಜಾತಿಯ ತಂಬಾಕು ಬೆಳೆಯುವ 150 ರೈತರಿಗೆ ನರ್ಸರಿಗೆ ಅಗತ್ಯ ಟ್ರೇಗಳನ್ನು ವಿತರಿಸಲಾಯಿತು.

ಕೇಂದ್ರದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರದ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ರೈತರಿಗೆ ಟ್ರೇಗಳನ್ನು ವಿತರಿಸಿ ಮಾತನಾಡಿದರು. ತಂಬಾಕು ಕೃಷಿಯಲ್ಲಿ ರೈತರು ಟ್ರೇ ನರ್ಸರಿ ಪದ್ಧತಿ ಅನುಸರಿಸಿದರೆ ತಂಬಾಕು ಸಸಿಗೆ ತಗಲುವ ವಿವಿಧ ಹುಳುಗಳ ಬಾಧೆ ನಿಯಂತ್ರಿಸಲು ಸಾಧ್ಯ. ಟ್ರೇ ನರ್ಸರಿ ಪದ್ಧತಿಯು ಇತ್ತೀಚಿನ ವರ್ಷಗಳಲ್ಲಿ ತಂಬಾಕಿಗೆ ರೋಗಬಾಧೆ ತಡೆಯಲು ಉತ್ತಮ ಮಾರ್ಗವಾಗಿದೆ. ಜತೆಗೆ ಶೇ.8-10ರಷ್ಟು ಇಳುವರಿ ಹೆಚ್ಚಿಸಿಕೊಳ್ಳಬಹುದು, ಗುಣಮಟ್ಟದ ಎಲೆಗಳನ್ನು ಪಡೆಯಬಹುದಾಗಿದೆ ಎಂದರು.

ಎಸ್‌ಇಪಿ ಯೋಜನೆಯಡಿ ತಾಲೂಕಿನ 150ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ರೈತರಿಗೆ ಒಂದು ಎಕರೆಗೆ ಅವಶ್ಯವಿರುವ 80 ಟ್ರೇಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ರಾಸಾಯನಿಕ ಗೊಬ್ಬರಗಳ ಹಿತಮಿತವಾದ ಬಳಕೆ, ನೂತನವಾಗಿ ಆವಿಷ್ಕಾರಗೊಂಡ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕವನ್ನಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕೆಂದು ಸಲಹೆ ನೀಡಿದರು.
ತಂಬಾಕು ಮಂಡಳಿಯ ಪ್ರಾದೇಶಿಕ ಅಧಿಕಾರಿ ಲಕ್ಷ್ಮಣರಾವ್ ಮಾತನಾಡಿ, ತಂಬಾಕಿನ ಬೇಲ್ ನಿರ್ಮಾಣದ ವೇಳೆ ಅನ್ಯಪದಾರ್ಥಗಳು ಸೊಪ್ಪಿನೊಂದಿಗೆ ಸೇರದಂತೆ ಎಚ್ಚರಿಕೆಯಿಂದ ಕಟ್ಟಬೇಕೆಂದು ತಿಳಿಸಿದರು.

ಐಟಿಸಿ ಕಂಪನಿಯ ಮ್ಯಾನೇಜರ್ ಶ್ರೀನಿವಾಸರೆಡ್ಡಿ, ಹರಾಜು ಅಧೀಕ್ಷಕ ಶಂಭುಲಿಂಗೇಗೌಡ, ಸಿಟಿಆರ್‌ಐ ಹಿರಿಯ ವಿಜ್ಞಾನಿ ಡಾ.ಮಹದೇವಸ್ವಾಮಿ, ಡಾ.ಜೆ.ರಾಜಪ್ಪ, ತಾಂತ್ರಿಕ ಅಧಿಕಾರಿಗಳಾದ ಪುಟ್ಟಮಲ್ಲಯ್ಯ, ವೆಂಕಟೇಶ್, ಶರೀಫ್, ಸುರೇಶ್‌ಕುಮಾರ್, ರೋಹಿಣಿ, ಗೋಪಾಲ್ ರಾವ್ ಹಾಗೂ ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net