

ರಾಯಬಾಗ: ಕ್ಯಾನ್ಸರ್‌ನಂತಹ ಮಾರಾಣಾಂತಿಕ ಖಾಯಿಲೆ ಉಂಟುಮಾಡುವ ತಂಬಾಕು ಉತ್ಪನ್ನಗಳ ಬಳಕೆಯಿಂದ ಯುವಕರು ದೂರವಿರಬೇಕು ಎಂದು ಹೆಚ್ಚುವರಿ ದಿವಾಣಿ ನ್ಯಾಯಾಧಿಶ ದಾನಪ್ಪ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನ ಉದ್ಘಾಟಿಸಿ ಮಾತನಾಡಿ, ತಂಬಾಕು ಸೇವನೆ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ, ಸೇವನೆ ನಿಷೇಧ ಮಾಡಿದ್ದು, ಈ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲು ಸರ್ಕಾರ ಸೂಚಿಸಿದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಾಟೀಲ ಮಾತನಾಡಿ, ತಂಬಾಕು ಪದಾರ್ಥ ಸೇವಿಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಬಳಕೆಯನ್ನು ಗಣನೀಯವಾಗಿ ಕಡೆಮೆಗೊಳಿಸಲು ಸರ್ಕಾರ ಅನೇಕ ಯೋಜನೆ ರೂಪಿಸಿದೆ ಎಂದರು.
ವಕೀಲ ಡಿ.ಎಚ್.ಯಲ್ಲಟ್ಟಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಂ.ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ, ಎಪಿಪಿ ಹನುಮಂತ ಅಚಮಟ್ಟಿ, ಡಾ.ಆರ್.ಎಚ್.ರಂಗಣ್ಣನವರ, ಪಿಎಸ್‌ಐ ನರಸಿಂಹರಾಜು ಜೆ.ಡಿ., ನಂದಕುಮಾರ ಪಾಟೀಲ, ಶ್ರೀಶೈಲ ಶಿರೂರ, ಗೀತಾ ಮಾನಕಪ್ಪಗೋಳ, ಸದಾಶಿವ ಚಿಗರಿ, ಇತರರಿದ್ದರು.