ತಂಬಾಕು ನಿಯಂತ್ರಣ ಕಾರ್ಯಾಚರಣೆಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ನಿರ್ದೇಶನ

dr.K.V.Rajendra new dc
Published on

ಮೈಸೂರು: ಆರೋಗ್ಯ ಇಲಾಖೆಯೊಂದಿಗೆ ಎಲ್ಲ ಇಲಾಖೆಗಳು ಸಮನ್ವಯ ಸಾಧಿಸಿ ತಂಬಾಕು ನಿಯಂತ್ರಣ ಕಾರ್ಯಾಚರಣೆಯನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಕೆ.ವಿ. ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಇಲಾಖೆಯ ಅಧಿಕಾರಿಗಳ ತಂಡವು ನಿಯಮಿತವಾಗಿ ದಾಳಿ ಕೈಗೊಂಡು, ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು (ಕೋಟ್ಪಾ) ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಮೂಲಕ ಯಶಸ್ವಿಗೊಳಿಸಬೇಕು. ನಮ್ಮ ಆರೋಗ್ಯ ನೋಡಿಕೊಳ್ಳುವ ರೀತಿಯಲ್ಲಿಯೇ ಸಾರ್ವಜನಿಕರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಬೀಡಿ, ಸಿಗರೇಟ್, ತಂಬಾಕು ಉತ್ಪನ್ನಗಳ ಸೇವನೆಯ ವಿರುದ್ಧ ಪೊಲೀಸ್, ಶಿಕ್ಷಣ, ಆರೋಗ್ಯ ಇಲಾಖೆ, ನಗರ ಪಾಲಿಕೆ ಅಧಿಕಾರಿಗಳು ನಿರಂತರ ಜಾಗೃತಿ ಮೂಡಿಸಬೇಕು. ತಂಬಾಕು ನಿಯಂತ್ರಣ ಕಾಯ್ದೆ ಕುರಿತು ಪ್ರಚಾರ ಫಲಕಗಳನ್ನು ಪ್ರದರ್ಶಿಸಬೇಕು ಎಂದರು.

ಜಿಲ್ಲಾ ತಂಬಾಕು ನಿಯಂತ್ರಣ ತಂಡದಿಂದ ಜಿಲ್ಲೆಯಲ್ಲಿ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳ ಅಧಿನಿಯಮದಡಿ ದಾಳಿ ನಡೆಸಿ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧಿಸಿರುವ ಕುರಿತು, ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹಿರಾತು ನಿಷೇಧದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಹಾಗೂ ದಂಡ ವಿಧಿಸಬೇಕು ಎಂದು ನಿರ್ದೇಶನ ನೀಡಿದರು.

ಶಾಲಾ ಕಾಲೇಜಿನ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮತ್ತು ಮಾರಾಟ ನಿಷೇಧವೆಂಬ ಫಲಕವನ್ನು ಬರೆಸಬೇಕು ಹಾಗೂ 100 ಮೀಟರ್ ವ್ಯಾಪ್ತಿಯಲ್ಲಿ ಮಾರಾಟ ನಿಷೇಧಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್, ಡಿಡಿಪಿಐ ರಾಮಚಂದ್ರರಾಜೇ ಅರಸ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net