

ಅರಕಲಗೂಡು: ಅತಿವೃಷ್ಟಿ ಸಂಕಷ್ಟ ಎದುರಿಸಿ ಹೊಗೆಸೊಪ್ಪು ಬೆಳೆದ ತಾಲೂಕಿನ ಬೆಳೆಗಾರರು ಇದೀಗ ಗ್ರೇಡಿಂಗ್ ಕಾರ್ಯವನ್ನು ಬೆಳೆಗಾರರು ಚುರುಕುಗೊಳಿಸಿದ್ದಾರೆ.
ಈ ಬಾರಿ ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ತಂಬಾಕು ಉತ್ಪಾದನೆ ತಗ್ಗಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಬೆಳೆ ಇಳುವರಿ ಕುಂಠಿತಗೊಂಡಿದ್ದು ರೈತರು ಹೆಚ್ಚಿನ ನಷ್ಟಕ್ಕೆ ಒಳಗಾಗಿದ್ದಾರೆ. ಸಸಿಗಳನ್ನು ನಾಟಿ ಮಾಡಿದ ದಿನದಿಂದ ಕಟಾವು ಮುಗಿಯುವವರೆಗೂ ಎಡಬಿಡದೆ ಸುರಿದ ಧಾರಾಕಾರ ಮಳೆಯಿಂದಾಗಿ ರಸಗೊಬ್ಬರ ನೀಡುವ, ಬೇಸಾಯ ಮಾಡುವ ಮತ್ತು ಕಟಾವು ಮಾಡುವ ಸಂದರ್ಭದಲ್ಲಿ ರೈತರಿಗೆ ಮಳೆ ಹೊಡೆತ ಅನುಭವಿಸಬೇಕಾಯಿತು.
ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯು ಆಗಷ್ಟೇ ನಾಟಿ ಮಾಡಿದ್ದ ಹೊಗೆಸೊಪ್ಪು ಗಿಡಗಳ ಬೆಳವಣಿಗೆಯನ್ನು ಕುಗ್ಗಿಸಿ ತಗ್ಗು ಪ್ರದೇಶದಲ್ಲಿನ ಹೊಲ ದ್ದೆಗಳಲ್ಲಿನ ಸಸಿಗಳೆ ಕೊಳೆತು ಹೋದವು. ಮೊದಲ ಹಂತಕ್ಕೆ ನೀಡಿದ್ದ ಮೇಲು ಗೊಬ್ಬರವನ್ನು ಬಸಿದು ಹೋಗುವಂತೆ ಮಾಡಿ ಗೊಬ್ಬರಕ್ಕೆ ನೀಡಿದ್ದ ಸಾವಿರಾರು ರೂ ಹಣವೂ ವ್ಯರ್ಥವಾಯಿತು. ಮೊದಲ ಹಂತದಲ್ಲಿಯೇ ಹೊಗೆಸೊಪ್ಪು ಗಿಡಗಳ ಬೆಳವಣೆಗೆ ಕುಂಠಿತವಾಯಿತು.
ಮತ್ತೆ ಜುಲೈ ತಿಂಗಳಲ್ಲಿ ಸತತವಾಗಿ ಸುರಿಯಲು ಪ್ರಾರಂಭವಾದ ಮಳೆಯು ಹೇಗೊ ಬದುಕುಳಿದಿದ್ದ ಗಿಡಗಳು ಅತಿಯಾದ ಶೀತದಿಂದ ಸಂಪೂರ್ಣ ಕುಗ್ಗಿ ಹೋಗುವಂತೆ ಮಾಡಿತು. ಸುಮಾರು 25ರಿಂದ 30 ಎಲೆಗಳನ್ನು ಬಿಡುತ್ತಿದ್ದ ಹೊಗೆಸೊಪ್ಪು ಗಿಡಗಳು 10 ರಿಂದ 12 ಎಲೆಗಳಷ್ಟಕ್ಕೆ ಸೀಮಿತವಾಗಿ ಬೆಳೆದು ಸುಮಾರು ಅರ್ಧದಷ್ಟು ಪ್ರಮಾಣದ ತಂಬಾಕು ಉತ್ಪಾದನೆಯು ಕಡಿಮೆಯಾಗಿದೆ. ಪ್ರತಿವರ್ಷ 1 ಹೆಕ್ಟೇರ್‌ರಿಗೆ 2 ಸಾವಿರ ಕೆ ಜಿ ಹೊಗೆಸೊಪ್ಪು ಬೆಳೆಯುತ್ತಿದ್ದ ರೈತರು ಈ ಸಲ 1000 - 1200 ಕೆಜಿ ವರೆಗೆ ಉತ್ಪಾದನೆ ಸಾಧ್ಯವಾಗಿದೆ. 2020-21 ನೇ ಸಾಲಿನಲ್ಲಿ ರಾಮನಾಥಪುರ ತಂಬಾಕು ಮಾರುಕಟ್ಟೆಯ ವ್ಯಾಪ್ತಿಯಲ್ಲಿ 11.23 ಮಿಲಿಯನ್ ಕೆಜಿ ತಂಬಾಕು ಉತ್ಪಾದನೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅತಿಯಾದ ಮಳೆಯಿಂದಾಗಿ ಉತ್ಪಾದನೆ ಪ್ರಮಾಣ ಕುಸಿದಿದೆ.
ಪ್ರತಿವರ್ಷ ಹೊಗೆಸೊಪ್ಪು ಎಲೆಗಳು ಗಟ್ಟಿಯಾಗಿದ್ದು ಉತ್ತಮ ದರ್ಜೆಯ ಹೊಗೆಸೊಪ್ಪು ಉತ್ಪಾದನೆಯಾಗುತ್ತಿತ್ತು. ಈ ವರ್ಷ ಅಧಿಕ ಮಳೆ ಮತ್ತು ಗಿಡಗಳಿಗೆ ಅಗತ್ಯದಷ್ಟು ರಸಗೊಬ್ಬರ ದೊರಕಿಲ್ಲದ್ದರಿಂದ ಉತ್ಪಾದಿಸುತ್ತಿರುವ ತಂಬಾಕಿನ ಎಲೆಗಳು ಮೃದುವಾಗಿದ್ದು ತೂಕವು ಕಡಿಮೆಯಾಗಿದೆ. ಅತಿವೃಷ್ಟಿಯಿಂದ ಎಲೆಗಳ ಮೇಲಿನ ಅಂಟಿನ ಅಂಶವು ಕಡಿಮೆಯಾಗಿದ್ದು ತೆಳುವಾಗಿರುವುದರಿಂದ ಹೆಚ್ಚು ದಿನ ಹದಮಾಡಿರುವ ಸೊಪ್ಪನ್ನು ಕೆಡದಂತೆ ಇಡುವುದು ಬೆಳೆಗಾರರಿಗೆ ಸವಾಲಿನ ಕೆಲಸವಾಗಿದೆ.
ಬಹುತೇಕ ಸೆಪ್ಟೆಂಬರ್ ತಿಂಗಳಲ್ಲಿ ತಂಬಾಕು ಮಾರುಕಟ್ಟೆ ಪ್ರಾರಂಭವಾಗುತ್ತಿತ್ತು. ಆಂಧ್ರದಲ್ಲಿ ತಂಬಾಕು ಮಾರುಕಟ್ಟೆಯು ಮುಗಿದು ಒಂದು ತಿಂಗಳಾಗಿದ್ದು ಕರ್ನಾಟಕದಲ್ಲಿ ಪ್ರಾರಂಭಿಸಿಲ್ಲದಿರುವುದು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂಬುದು ಅನೇಕ ಬೆಳೆಗಾರರ ಪ್ರಶ್ನೆಯಾಗಿದೆ. ಎಲ್ಲಾ ಬೆಳೆಗಾರರು ತಂಬಾಕು ಉತ್ಪಾದನೆ ಪೂರ್ಣಗೊಳಿಸಿ ತರಾತುರಿಯಿಂದ ಗ್ರೇಡ್ ಮಾಡಿಸಲು ಪ್ರಾರಂಭಿಸಿದ್ದಾರೆ. ಇಂದಿಗೂ ಮಳೆ ಮತ್ತು ಮೋಡದ ವಾತಾವರಣವು ಮುಂದುವರೆದಿರುವುದರಿಂದ ಹೆಚ್ಚು ದಿನ ಇಟ್ಟರೆ ಅತಿಯಾದ ಶೀತದಿಂದ ಮೃದುವಾಗಿ ಗುಣಮಟ್ಟ ಕಡಿಮೆಯಾಗಿ ಕಡಿಮೆ ಬೆಲೆ ಸಿಗುವ ಭಯ ಒಂದೆಡೆಯಾದರೆ, ಮಳೆ ನಿಂತು ಬಿಸಿಲು ಬರಲಾರಂಭಿಸಿದರೆ ಸೊಪ್ಪು ಉಷ್ಣಾಂಶಕ್ಕೆ ಒಣಗಿದಂತಾಗಿ ತೂಕ ಕಳೆದುಕೊಂಡು ನಷ್ಟ ಅನುಭವಿಸುವ ಅತಂಕ ಕಾಡುತ್ತಿದೆ.
ನೆರೆಯ ರಾಜ್ಯ ಅಂಧ್ರಪ್ರದೇಶದಲ್ಲಿ ಈಗಾಗಲೆ ಉತ್ತಮ ದರ್ಜೆಯ ತಂಬಾಕು ಪ್ರತಿ ಕೆಜಿ ಗೆ 245- 250 ಬೆಲೆ ಸಿಗುತ್ತಿದ್ದು, ಸರಾಸರಿ ಬೆಲೆಯು ಪ್ರತಿ ಕೆಜಿಗೆ 179 ರೂ ದೊರೆತಿದ್ದು, ರಾಜ್ಯದ ತಂಬಾಕು ಬೆಳೆಗಾರರು ಉತ್ತಮ ಬೆಲೆಯ ನೀರೀಕ್ಷೆಯಲ್ಲಿದ್ದರೂ ಅತಿವೃಷ್ಟಿಯಿಂದಾಗಿ ಕಡಿಮೆ ಉತ್ಪಾದನೆ, ಉತ್ಪಾದನೆಗೆ ಅಧಿಕ ವೆಚ್ಚ ಕೂಡ ತಗುಲಿದೆ ಎಂದು ರೈತರು ಅವಲತ್ತುಕೊಂಡಿದ್ದಾರೆ.
ಯೋಗಣ್ಣ, ತಾಲೂಕು ರೈತ ಸಂಘದ ಅಧ್ಯಕ್ಷ.
"ತಂಬಾಕು ಬೆಳೆಗಾರರು ಗ್ರೇಡಿಂಗ್ ಕೆಲಸ ಅರಂಭಿಸಿದ್ದಾರೆ. ಈ ಬಾರಿ ಅತಿಯಾದ ಮಳೆಯಿಂದಾಗಿ ಹೊಗೆಸೊಪ್ಪು ಉತ್ಪಾದನೆಯು ಕಡಿಮೆಯಾಗಿದ್ದು ಮಳೆಯ ವಾತಾವರಣವಿರುವುದರಿಂದ ತಂಬಕು ಹೆಚ್ಚು ಇಡಲಾಗುವುದಿಲ್ಲ. ಇಟ್ಟರೆ ತಂಬಾಕಿನ ಬಣ್ಣಕೆಟ್ಟು ಗುಣಮಟ್ಟ ಕಡಿಮೆಯಾಗಿ ನಷ್ಟವಾಗುತ್ತದೆ. ಆದಷ್ಟು ಬೇಗ ಮಾರುಕಟ್ಟೆಯನ್ನು ಪ್ರಾರಂಭಿಸಬೇಕು. ಹೊಗೆಸೊಪ್ಪಿನ ಮಾರಾಟಕ್ಕೆ ವಿಧಿಸಿರುವ ಜಿಎಸ್‌ಟಿ ರದ್ದುಗೊಳಿಸಬೇಕು. ಹೊಗೆಸೊಪ್ಪಿನ ಪುಡಿಯನ್ನು ಮಂಡಳಿಯ ವತಿಯಿಂದ ಮಾರಾಟ ಮಾಡಿಸಬೇಕು"
ಯೋಗೇಶ್‌ಗೌಡ, ಕ್ಷೇತ್ರಾಧಿಕಾರಿ, ತಂಬಾಕು ಮಾರುಕಟ್ಟೆ, ರಾಮನಾಥಪುರ.
"ರಾಮನಥಪುರ ತಂಬಾಕು ಮಾರುಕಟ್ಟೆಯಲ್ಲಿ ಅಕ್ಟೋಬರ್ 10ರಂದು ಹರಾಜು ಪ್ರಕ್ರಿಯೆ ಶುರುವಾಗಲಿದೆ. ಸೆ. ಕೊನೆ ವಾರದಲ್ಲಿ ಅರಂಭಿಸಬೇಕಿದ್ದು ಮಾರುಕಟ್ಟೆ ಈ ಬಾರಿ ದಸರಾ ರಜೆ ಕಾರಣ ಒಂದೆರಡು ವಾರಗಳ ಕಾಲ ತಡವಾಗಿದೆ"