

ಮೈಸೂರು: ತಂಬಾಕು ಮಂಡಳಿಯು ಕರ್ನಾಟಕದಲ್ಲಿ ಎಫ್.ಸಿ.ವಿ ತಂಬಾಕು ಬೆಳೆಗಾರರ ಕ್ಷೇತ್ರಗಳಲ್ಲಿ ನೈಜ ಸಮಯದ ಮಾಹಿತಿಯನ್ನು ಸೆರೆಹಿಡಿಯಲು ಹೊಸ ತಂತ್ರಜ್ಞಾನವನ್ನು ಕಾರ್ಯಗತಗೊಳಿಸುತ್ತಿದೆ ಎಂದು ತಂಬಾಕು ಮಂಡಳಿ ವ್ಯವಸ್ಥಾಪಕ (ಉತ್ಪಾದನೆ) ಡಾ.ಎಂ.ಕೃಷ್ಣ ತಿಳಿಸಿದರು.
ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಹರಾಜು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅದರಲ್ಲೂ ಕರ್ನಾಟಕದ ಮೈಸೂರು ಎಫ್.ಸಿ.ವಿ ತಂಬಾಕಿಗೆ ಹೆಚ್ಚು ಬೇಡಿಕೆ ಇದೆ. ಆದರೂ ತಂಬಾಕು ಖರೀದಿದಾರ ಕಂಪನಿಗಳು ಮತ್ತಷ್ಟು ಗುಣಮಟ್ಟವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುಣಮಟ್ಟದ ತಂಬಾಕು ಉತ್ಪಾದನೆಗೆ ಒತ್ತು ನೀಡಬೇಕಿದೆ. ಇದಕ್ಕಾಗಿ ಆಪ್ ಮೂಲಕ ಹೊಗೇಸೊಪ್ಪು ಬೆಳೆಯ ನಿಖರ ಮಾಹಿತಿ ಒದಗಿಸುವ ಯೋಜನೆಯ ಪೈಲಟ್ ಪ್ರಾಜೆಕ್ಟ್ ಅನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಮೈಸೂರು ಮತ್ತು ಪಿರಿಯಾಪಟ್ಟಣ ಪ್ರಾದೇಶಿಕ ವ್ಯವಸ್ಥಾಪಕ ಜಿ.ಬಿ.ಸುಬ್ಬರಾವ್ ಮಾತನಾಡಿ, ತಂಬಾಕು ಮಂಡಳಿಯು 2023-24ನೇ ಬೆಳೆ ಸಾಲಿಗೆ ಈ ಯೋಜನೆಯನ್ನು ಎಪಿಎಫ್ ನಂ.62, ಚಿಲ್ಕುಂದದ ಬೋರೆಹೊಸಹಳ್ಳಿ ಮತ್ತು ನಾಗಮಂಗಲ ಗ್ರಾಮ, ಎಪಿಎಫ್ ನಂ.3 ಹುಣಸೂರಿನ ಸೀರನಹಳ್ಳಿ ಮತ್ತು ಎಂ.ಜಿ.ಹಳ್ಳಿ ಮತ್ತು ಎಪಿಎಫ್ ನಂ.5 ಪಿರಿಯಾಪಟ್ಟಣದ ದೊರೆಕೆರೆ ಮತ್ತು ಕೊತ್ತಳ್ಳಿ ಕೊಪ್ಪಲು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದರು.
ಈ ತಂತ್ರಜ್ಞಾನದಲ್ಲಿ ತಂಬಾಕು ಮಂಡಳಿಯ ಕ್ಷೇತ್ರ ಸಹಾಯಕರು ಬೆಳೆಗಾರರ ಜಮೀನುಗಳನ್ನು ಮ್ಯಾಪ್ ಮಾಡಲಿದ್ದಾರೆ. ಅದರಲ್ಲಿ ಬೆಳೆಗಾರರು ಬಿತ್ತನೆ, ರಸಗೊಬ್ಬರ ಅನ್ವಯಿಸುವ ಸಮಯ, ಕುಡಿ ಮತ್ತು ಕಂಕುಳಕುಡಿ ನಿರ್ವಹಣೆ ಮತ್ತು ಕೊಯ್ಲು ಮಾಡುವುದಕ್ಕೆ ಸಂಬಂಧಿಸಿದಂತೆ ಅಪ್ಲಿಕೇಶನ್‌ನಲ್ಲಿ ಮಾಹಿತಿ ನಮೂದಿಸಲಿದ್ದಾರೆ. ಈ ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಎಫ್.ಸಿ.ವಿ ತಂಬಾಕು ಬೆಳೆಗಾರರು/ಗ್ರಾಮಗಳ ನಿಖರವಾದ ಉತ್ಪಾದನಾ ಅಂದಾಜು ಮಾಹಿತಿ ಪಡೆಯಲು ಸಹಕಾರಿಯಾಗಲಿದೆ. ಸಂಗ್ರಹಿಸಿದ ದತ್ತಾಂಶದಿಂದ ರೈತರಿಗೆ ಸಲಹೆ ಸೂಚನೆಗಳನ್ನು ನೀಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಈ ತಂತ್ರಜ್ಞಾನದಿಂದ ರೈತರು ನಿಖರವಾಗಿ ಎಷ್ಟು ಪ್ರದೇಶದಲ್ಲಿ ಬೆಳೆಯನ್ನು ನಾಟಿ ಮಾಡಿರುತ್ತಾರೆ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲದೇ ಬೆಳೆಗಾರರಿಗೆ ರಸಗೊಬ್ಬರವನ್ನು ಯಾವ ಸಮಯದಲ್ಲಿ ಮತ್ತು ಯಾವ ಪ್ರಮಾಣದಲ್ಲಿ ಹಾಕಬೇಕು, ಕುಡಿ ಮತ್ತು ಕಂಕುಳಕುಡಿ ನಿರ್ವಹಣೆ ಯಾವ ಸಮಯದಲ್ಲಿ ಮಾಡಬೇಕು ಎಂಬುದರ ಮಾಹಿತಿಯನ್ನು ಪಡೆಯಬಹುದು. ಇದರಿಂದ ಗುಣಮಟ್ಟದ ಹೊಗೆಸೊಪ್ಪನ್ನು ಬೆಳೆಯಬಹುದಾಗಿದೆ.
ಕುಚೇಲಗೌಡ
ಸಿರೇನಹಳ್ಳಿ ಗ್ರಾಮ, ಎ.ಪಿ.ಎಫ್ ಸಂಖ್ಯೆ 3, ಹುಣಸೂರು