

ಬಳ್ಳಾರಿ : ತಂಬಾಕು ಜಗಿಯುವುದರಿಂದ ಬಾಯಿ ಮತ್ತು ವಸಡಿನ ಕ್ಯಾನ್ಸರ್ ಬರುತ್ತದೆ. ಹೀಗಾಗಿ ತಂಬಾಕು ಉತ್ಪನ್ನಗಳಿಂದ ದೂರವಿರಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್ ಹೇಳಿದರು.
ತಾಲೂಕಿನ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಯುಷ್ ವೈದ್ಯಾಧಿಕಾರಿ ಡಾ.ನಾರಾಯಣ ಬಾಬು ಮಾತನಾಡಿ, ತಂಬಾಕು ಮತ್ತು ಧೂಮಪಾನ ಮಾಡುವುದರಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು. ಬಿಡಿ, ಸಿಗರೇಟ್ ಸೇದುವ ಹಾಗೂ ತಂಬಾಕು ಜಗಿಯುವ ಗಂಡಸರಲ್ಲಿ ವೀರ್ಯಾಣುಗಳ ಪ್ರಮಾಣ ಕಡಿಮೆಗೊಳ್ಳುವುದರಿಂದ ಸಂತಾನೋತ್ಪತ್ತಿಗೆ ಅಡ್ಡಿಯಾಗುತ್ತದೆ ಎಂದರು.