

ಚಿತ್ರದುರ್ಗ: ನಿಯಮಬಾಹಿರವಾಗಿ ತಂಬಾಕು ಉತ್ಪನಗಳನ್ನು ಮಾರಾಟ ಮಾಡುವುದು ಅಪರಾಧವಾಗಿದ್ದು, ಅಂತಹ ಅಂಗಡಿಗಳ ಮಾಲೀಕರಿಂದ ದಂಡ ವಸೂಲಾದರೆ ಸಾಲದು, ಪದೇ ಪದೆ ನಿಮಯ ಉಲ್ಲಂಘಿಸುವ ಅಂಗಡಿಗಳ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸಬೇಕೆಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, 2003ರ ಕೋಟ್ಪಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿಬಂಧನೆ ವಿಧಿಸಿ, ಸ್ಥಳೀಯ ಸಂಸ್ಥೆಗಳು ಅಂಗಡಿಗಳಿಗೆ ಪರವಾನಗಿ ನೀಡಬೇಕು. ನಿಯಮ ಪಾಲಿಸಿದ ಅಂಗಡಿಗಳ ಮೇಲೆ ದಾಳಿ ನಡೆಸಿ, ಫೋಟೋ ಹಾಗೂ ವಿಡಿಯೋ ಸಹಿತ ವರದಿಯೊಂದಿಗೆ ಮುಲಾಜಿಲ್ಲದೆ ಪರವಾನಗಿ ರದ್ದುಪಡಿಸಬೇಕು ಎಂದರು.
ಪ್ರೌಢಶಾಲೆ, ಪಿಯು ಹಂತದಲ್ಲೇ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳೆಡೆ ಆಕರ್ಷಿತವಾಗುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ಶಾಲಾ, ಕಾಲೇಜುಗಳ ಆವರಣಗಳನ್ನು ಕಡ್ಡಾಯವಾಗಿ ತಂಬಾಕು ಮುಕ್ತ ಪ್ರದೇಶವನ್ನಾಗಿ ಮಾಡಬೇಕು. ಗ್ರಾಪಂ ಅಧಿಕಾರಿಗಳು ಕಾರ‌್ಯಾಚರಣೆ ನಡೆಸಬೇಕು ಎಂದು ತಿಳಿಸಿದರು.
ಬಸ್ ನಿಲ್ದಾಣಗಳ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನಗಳ ಮಾರಾಟ ಹಾಗೂ ಉಪಯೋಗ ನಿಷೇಧಿಸಲಾಗಿದೆ. ಆದರೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮಳಿಗೆಗಳಲ್ಲೇ ತಂಬಾಕು ಉತ್ಪನ್ನಗಳ ಮಾರಾಟ ಕಂಡು ಬಂದಿದೆ. ಇಂತಹ ಅಂಗಡಿಗಳ ಟೆಂಡರ್ ರದ್ದುಪಡಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಿಕ್ಷಕರು ತಂಬಾಕು ಉತ್ಪನಗಳ ಬಳಕೆಯಿಂದ ದೂರವಿದ್ದು ಮಕ್ಕಳಿಗೆ ಮಾದರಿಯಾಗಬೇಕು. ಅಧಿಕಾರಿಗಳು ಶಾಲೆಗಳಲ್ಲಿ ತಂಬಾಕು ಬಳಕೆ ಮೇಲೆ ನಿಗಾವಹಿಸಬೇಕು. ಶಾಲೆಗಳಿಗೆ ಡಿಡಿಪಿಐ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಬೇಕು. ಕೃಷಿ, ತೋಟಗಾರಿಕೆ ಇಲಾಖೆಗಳು ರೈತರಲ್ಲಿ ಜಾಗೃತಿ ಮೂಡಿಸಬೇಕೆಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ ಮಾತನಾಡಿ, ಪ್ರಸ್ತಕ ವರ್ಷ ಜಿಲ್ಲೆಯ 35 ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ‌್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ 1993 ಜನರು ಸೇವೆ ಪಡೆದಿದ್ದಾರೆ. 239 ಜನರಿಗೆ ಚಿಕಿತ್ಸೆ ನೀಡಲಾಗಿದ್ದು, 25 ಜನರು ತಂಬಾಕು ತ್ಯಜಿಸಿದ್ದಾರೆ ಎಂದು ಹೇಳಿದರು.
ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಪ್ರಭುದೇವ ಬಿರಾದರ್ ಮಾತನಾಡಿ, ಸರ್ಕಾರ ಸೂಚನೆಯಂತೆ 60 ದಿನಗಳ ಕಾಲ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ತಂಬಾಕು ಬಳಕೆ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.
ತಂಬಾಕು ಮುಕ್ತ ಚಿತ್ರದುರ್ಗ ಜಿಲ್ಲೆ ನಮ್ಮಗುರಿ ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು. ಡಿಡಿಪಿಐ ಎಂ.ಆರ್.ಮಂಜುನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಜಿಲ್ಲಾ ಮಾನಸಿಕ ಕಾರ‌್ಯಕ್ರಮಗ ಳ ಅನುಷ್ಠಾನಾಧಿಕಾರಿ ಡಾ.ನಾಗರಾಜ್,ಪ್ರಭಾ ರ ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ.ರೇಖಾ,ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ಇತರರು ಇದ್ದರು.