

ಪಾಂಡವಪುರ: ಯುವ ಸಮುದಾಯಕ್ಕೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ಮನ ಮುಟ್ಟುವಂತೆ ತಿಳಿಸಬೇಕಿದೆ ಎಂದು ಜನ ಜಾಗೃತಿ ವೇದಿಕೆ ಯೋಜನಾಧಿಕಾರಿ ಮಾಧವ್ ತಿಳಿಸಿದರು.
ಪಟ್ಟಣದ ಕೈಗಾರಿಕಾ ತರಬೇತಿ ಕಾಲೇಜಿನ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ಯುವ ಸಮುದಾಯವನ್ನು ತಂಬಾಕು ಸೇವನೆಯಿಂದ ಹೇಗೆ ರಕ್ಷಿಸುವುದು ಎಂಬುದರ ಬಗ್ಗೆ ಯೋಜನೆಗಳನ್ನು ರೂಪಿಸಿ ಅವರಿಗೆ ಅರಿವನ್ನು ಮೂಡಿಸುವ ಜತೆಗೆ ತಂಬಾಕು ನಿಯಂತ್ರಣದಕ್ಕಾಗಿ ಇಡೀ ಸಮಾಜ ಒಗ್ಗೂಡಿ ಕೆಲಸ ಮಾಡಬೇಕಿದೆ. ತಂಬಾಕು ದುಶ್ಚಟಕ್ಕೆ ದಾಸರಾಗಿ ವಿಶ್ವದಲ್ಲಿ ಪ್ರತಿದಿನ ಸುಮಾರು 80 ಲಕ್ಷ ಹಾಗೂ ದೆಶದಲ್ಲಿ 14 ಲಕ್ಷಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ದುಶ್ಚಟಕ್ಕೆ ದಾಸರಾಗಿರುವ ಯುವ ಸಮೂಹವನ್ನು ದಾಸಮುಕ್ತರನ್ನಾಗಿಸುವುದು ಒಂದು ಸವಾಲಿನ ಕೆಲಸವಾಗಿದೆ ಎಂದರು.
ಧರ್ಮಸ್ಥಳ ಸಂಸ್ಥೆಯ ಮೇಲುಕೋಟೆ ಯೋಜನಾಧಿಕಾರಿ ಸರೋಜಾ ಮಾತನಾಡಿ, ಮನೆಗಳಲ್ಲಿ ಹಿರಿಯರು ಎನಿಸಿಕೊಂಡವರು ಧೂಮಪಾನ ಚಟಕ್ಕೆ ಒಳಗಾದರೆ ಕಿರಿಯರು ಅವರನ್ನು ಅನುಸರಿಸಿ ಕಾಲ ಕ್ರಮೇಣ ತಂಬಕು ವ್ಯಸನಿಗಳಾಗುತ್ತಾರೆ. ಧೂಮಪಾನಿ ಸ್ನೇಹಿತರ ಸಹವಾಸ, ನಟ-ನಟಿಯರನ್ನು ಅನುಕರಣೆ ಮಾಡುವುದು, ಧೂಮಪಾನಿ ಪಾಲಕರ ಪ್ರಭಾವ ಹೀಗೆ ಹತ್ತು ಹಲವು ಕಾರಣಗಳಿಂದ ಧೂಮಪಾನದ ಚಟ ಅಂಟಿಸಿಕೊಂಡು ಆರೋಗ್ಯ ಹದಗೆಡಿಸಿಕೊಳ್ಳುವ ಜತೆಗೆ ಆರ್ಥಿಕ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ.ವಿರೇಂದ್ರ ಹೆಗ್ಗಡೆಯವರು ಮದ್ಯವರ್ಜನ ಶಿಬಿರಗಳ ಆಯೋಜನೆ ಹಾಗೂ ಪ್ರಕೃತಿ ಚಿಕಿತ್ಸಾ ಕೇಂದ್ರಗಳಲ್ಲಿ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಹೇಳಿದರು.
ಪ್ರಾಂಶುಪಾಲ ತೇಜೇಂದ್ರ, ಸಹ ಶಿಕ್ಷಕರಾದ ರಾಮಚಂದ್ರು, ಪವಿತ್ರಾ, ರೂಪಾ ಇತರರು ಇದ್ದರು.
ಪಾಂಡವಪುರ ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಜನ ಜಾಗೃತಿ ವೇದಿಕೆಯ ಯೋಜನಾಧಿಕಾರಿ ಮಾಧವ್ ಉದ್ಘಾಟಿಸಿದರು. ಸರೋಜಾ, ತೇಜೇಂದ್ರ, ರಾಮಚಂದ್ರ ಇತರರಿದ್ದರು.