

ಪಿರಿಯಾಪಟ್ಟಣ: ತಂಬಾಕಿನ ದರ ಕುಸಿತ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯ ಮುಂಭಾಗ ಅನಿರ್ದಿಷ್ಟಾವಧಿ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಮುಂಜಾನೆಯಿಂದಲೇ ಹರಾಜು ಮಾರುಕಟ್ಟೆಯ ಮುಖ್ಯದ್ವಾರಕ್ಕೆ ಬೀಗ ಹಾಕಿದ ಪ್ರತಿಭಟನಾ ನಿರತರು ತಂಬಾಕು ಬೆಳೆಗೆ ಸೂಕ್ತ ಬೆಲೆ ನೀಡುವವರೆಗೂ ಬೀಗ ತೆಗೆಯುವುದಿಲ್ಲ ಎಂದು ಅಧಿಕಾರಿಗಳಿಗೆ ೇರಾವ್ ಹಾಕಿದರು. ತಾಲೂಕಿನಲ್ಲಿ ತಂಬಾಕು ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಇದನ್ನೇ ನಂಬಿ ರೈತರು ಬದುಕುತ್ತಿದ್ದಾರೆ. ತಂಬಾಕು ಹದಗೊಳಿಸಲು ಸಾಕಷ್ಟು ಶ್ರಮಪಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ತಂಬಾಕನ್ನು ತಿರಸ್ಕಾರ ಮಾಡುವುದಲ್ಲದೆ, ಸೂಕ್ತ ಬೆಂಬಲ ಬೆಲೆ ನೀಡದೆ ತಂಬಾಕು ಮಂಡಳಿ ಹಾಗೂ ಖರೀದಿ ಕಂಪನಿಗಳು ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಆದ್ದರಿಂದ ಅತಿ ಶೀಘ್ರದಲ್ಲಿ ತಂಬಾಕು ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಸಂಸದರ ಭೇಟಿ: ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಮೈಸೂರು ಮತ್ತು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಂಬಾಕು ರೈತರ ಸಮಸ್ಯೆಯನ್ನು ಆಲಿಸಿ ಮಾತನಾಡಿದ ಅವರು, ತಂಬಾಕು ರೈತರ ಸಂಕಷ್ಟದ ಬಗ್ಗೆ ನನಗೆ ಅರಿವಿದ್ದು, ತಂಬಾಕು ಬೆಳೆಗೆ ಸೂಕ್ತ ಬೆಲೆಯನ್ನು ನೀಡಬೇಕು ಎಂದು ಈಗಾಗಲೇ ಅಧಿಕಾರಿ ವರ್ಗ ಮತ್ತು ಖರೀದಿ ಕಂಪನಿಗಳಿಗೆ ಸೂಚಿಸಿದ್ದೇನೆ. ತಂಬಾಕು ರೈತರ ಸಮಸ್ಯೆಯನ್ನು ಬಗೆಹರಿಸಲು ತಂಬಾಕು ಮಂಡಳಿಯ ಮುಖ್ಯ ಕಚೇರಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಕರೆದಿದ್ದೇನೆ. ಈ ಸಭೆಯಲ್ಲಿ ತಂಬಾಕು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಮಾಜಿ ಶಾಸಕ ಎಚ್.ಸಿ.ಬಸವರಾಜ್, ರೈತ ಸಂಘದ ರಾಜ್ಯ ಸಂಚಾಲಕ ಸೈಯದ್ ಅಬ್ದುಲಾ, ಯುವ ಘಟಕದ ಅಧ್ಯಕ್ಷ ಫಯಾಜ್, ಜಿಲ್ಲಾಧ್ಯಕ್ಷ ರಫಿಕ್ ಉಲ್ಲಾ ಖಾನ್, ತಾಲೂಕು ಅಧ್ಯಕ್ಷ ಕುಮಾರ್, ಮುಖಂಡರಾದ ಮಂಜುನಾಥ್ ಆನಂದ ಗೆರೆ, ಪೆಂಜಳ್ಳಿ ನಾಗರಾಜೇಗೌಡ, ಹನಗೋಡು ಪ್ರಕಾಶ್, ಜಯರಾಮೇಗೌಡ, ಅನುಸೂಯ, ಗಂಗಾಧರ್, ಶ್ರೀನಿವಾಸ್, ಗಣೇಶ್, ತಾಲೂಕು ಬಿಜೆಪಿ ಅಧ್ಯಕ್ಷ ವಿ.ರಾಜೇಂದ್ರ, ಕೌಲನಹಳ್ಳಿ ಸೋಮಶೇಖರ್, ತಂಬಾಕು ಮಂಡಳಿ ವ್ಯವಸ್ಥಾಪಕ ಲಕ್ಷ್ಮಣ್‌ರಾವ್, ಹರಾಜು ಅಧಿಕ್ಷಕರಾದ ಪ್ರಭಾಕರನ್, ರಾಮ್ ಮೋಹನ್ ಸೂರಿ, ಐಸಾಕ್.ಎಸ್.ದತ್ ಸೇರಿದಂತೆ ಇತರರಿದ್ದರು.